ಚೆನ್ನೈ : 1 ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆಯು ತಮಿಳುನಾಡಿನಲ್ಲಿ 'ಪೀಪಲ್ಸ್ ಸ್ಕೂಲ್ ಸ್ಕೀಮ್' ಅನ್ನು ಪರಿಚಯಿಸಲಿದೆ. ಈ ಮೂಲಕ ಶಿಕ್ಷಕರು ಮನೆಗಳ ಬಳಿ ಹೋಗಿ ಪಾಠ ಮಾಡಲಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ತಮಿಳುನಾಡಿನ ಶಾಲೆಗಳನ್ನು ಮುಚ್ಚಲಾಗಿತ್ತು. ಈಗ ಕೊರೊನಾ ಪರಿಸ್ಥಿತಿ ಕಡಿಮೆಯಾದ ಹಿನ್ನೆಲೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸೆಪ್ಟೆಂಬರ್ 1ನೇ ತಾರೀಖಿನಿಂದ 9ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ತೆರೆಯಲಾಗಿದೆ.
ಈ ನಡುವೆ ಸರ್ಕಾರವು 1 ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೂ ಯಾವುದೇ ತೊಂದರೆ ಆಗಬಾರದು ಎಂದು ಅವರಿಗೂ ನೇರ ತರಗತಿಗಳನ್ನು ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ನವೆಂಬರ್ 1ರಿಂದ ಶಾಲೆಗಳು ಪ್ರಾರಂಭವಾಗುತ್ತವೆ.
ಆದರೆ, ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶೈಕ್ಷಣಿಕ ನ್ಯೂನ್ಯತೆಯಿಂದ ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವುದು ಕಂಡು ಬಂದಿದೆ. ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚುಗೊಳಿಸಲು ತಮಿಳುನಾಡು ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಬಜೆಟ್‌ನಿಂದ 200 ಕೋಟಿಗಳನ್ನು ವಿಶ್ವಸಂಸ್ಥೆಯ 'ಸಮಗ್ರ ಶಿಕ್ಷಣ' ಯೋಜನೆ ಮೂಲಕ ಮಂಜೂರು ಮಾಡಿದೆ.
ಕಲಿಕಾ ನಷ್ಟ ತುಂಬಲಿರುವ ಯೋಜನೆ : ಈ ಕಾರ್ಯಕ್ರಮದ ಮೂಲಕ ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ವಿದ್ಯಾರ್ಥಿಗಳಿಗೆ ಅವರ ಮನೆಗಳ ಬಳಿಯೇ ಹೋಗಿ ತರಬೇತಿ ನೀಡಲಾಗುತ್ತದೆ. ಇದರ ಆಧಾರದ ಮೇಲೆ, ಕಲಿಕಾ ಅಂತರ ಮತ್ತು ಕಲಿಕಾ ನಷ್ಟವನ್ನು ಕಡಿಮೆ ಮಾಡಲು ಶಿಕ್ಷಕರು ಮುಂದಾಗಿದ್ದಾರೆ ದಿನವೂ ಒಂದುವರೆ ಗಂಟೆಗಳ ಸಮಯ ಸ್ವಯಂಸೇವಕರೊಂದಿಗೆ ಕಲಿಕಾ ಚಟುವಟಿಕೆಗಳನ್ನು ಕೈಗೊಳ್ಳಲು, ಒಂದನೇ ತರಗತಿಯಿಂದ 8ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪೀಪಲ್ಸ್ ಸ್ಕೂಲ್ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಲು ಮುಂದಾಗಿದೆ.
ಗ್ರಾಮಸಭೆಯಲ್ಲಿ ಚರ್ಚೆ : ಅಕ್ಟೋಬರ್ 2ರಂದು ನಡೆಯುವ ಗ್ರಾಮ ಮಂಡಳಿ ಸಭೆಗಳಲ್ಲಿ ಈ ಯೋಜನೆಯನ್ನು ಶಾಲಾ ಶಿಕ್ಷಣ ಇಲಾಖೆಯು ಚರ್ಚಿಸಲಿದೆ. ಶಾಲಾ ಶಿಕ್ಷಣ ಇಲಾಖೆಯು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗ್ರಾಮ ಸಭೆಗಳಿಗೆ ಹಾಜರಾಗಿ ಸಲಹೆ ನೀಡುವಂತೆ ಆದೇಶಿಸಿದೆ.
ಪೀಪಲ್ಸ್ ಸ್ಕೂಲ್ ಕಾರ್ಯಕ್ರಮದ ಮೂಲಕ ಬೋಧಿಸುವ ಶಿಕ್ಷಕರಿಗೆ ಮೊತ್ತವನ್ನು ನೀಡಲು ಶಿಕ್ಷಣ ಇಲಾಖೆ ಯೋಜಿಸಿದೆ. ಪೀಪಲ್ಸ್ ಸ್ಕೂಲ್ ಕಾರ್ಯಕ್ರಮವನ್ನು ಮೊದಲಿಗೆ ಎಂಟು ಜಿಲ್ಲೆಗಳಲ್ಲಿ ಆರಂಭಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.