ಚೆನ್ನೈ(ತಮಿಳುನಾಡು): ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು 23 ಜಿಲ್ಲೆಗಳ ಹಾಗೂ ಪುದುಚೇರಿಯ 14 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ಚೆನ್ನೈ ನಗರದಲ್ಲಿ ರಾತ್ರಿಯಿಡೀ ಮಳೆ ಸುರಿದಿದ್ದು ಅಯಪಂತಂಗಲ್, ಪುಲಿಯಾಂತೋಪ್ ಮತ್ತು ವ್ಯಾಸರಪಾಡಿ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ.
ತಿರುವಳ್ಳೂರು, ರಾಣಿಪೇಟ್ ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಅಲ್ಲದೇ ತಮಿಳುನಾಡಿನ ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರ್, ಪುದುಕೊಟ್ಟೈ, ಶಿವಗಂಗಾ, ರಾಮನಾಥಪುರಂ, ವಿರುದುನಗರ, ಮಧುರೈ, ಥೇಣಿ, ದಿಂಡಿಗಲ್, ತಿರುಪ್ಪೂರ್, ಕೊಯಮತ್ತೂರು ಮತ್ತು ನೀಲಗಿರಿ ಜಿಲ್ಲೆಗಳಲ್ಲಿ ಕೂಡ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು 5,093 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದಾರೆ. 60 ಮೇಲ್ವಿಚಾರಣಾ ಅಧಿಕಾರಿಗಳು ಮಳೆಪೀಡಿತ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ 2,000ಕ್ಕೂ ಹೆಚ್ಚು ಪರಿಹಾರ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ಧಾರೆ.
ಶ್ರೀಲಂಕಾ ಕರಾವಳಿಯ ನೈಋತ್ಯಕ್ಕೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ತಮಿಳುನಾಡಿನಲ್ಲಿ ಮಳೆಯಾಗುತ್ತಿದೆ. ಈಶಾನ್ಯ ಮಾನ್ಸೂನ್ ಋತುವಿನಲ್ಲಿ ರಾಜ್ಯವು ಶೇ.35 ರಿಂದ 75ಕ್ಕೂ ಹೆಚ್ಚಿನ ಮಳೆ ಪಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ: 72 ವರ್ಷಗಳ ನಂತರ ದಾಖಲೆಯ ಮಳೆ