ಚೆನ್ನೈ (ತಮಿಳುನಾಡು) : ತಮಿಳುನಾಡಿನ ನೀಲಗಿರಿ ಪ್ರದೇಶದಲ್ಲಿ ಎರಡು ಹುಲಿಗಳಿಗೆ ವಿಷಪ್ರಾಶನ ಮಾಡಿ ಸಾಯಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ. ಕಳೆದ ವಾರ ನೀರಿನಲ್ಲಿ ಹುಲಿಗಳ ಕಳೆಬರಹ ಸಿಕ್ಕ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಆರೋಗ್ಯಯುತವಾಗಿದ್ದ ಹುಲಿಗಳು ಅಚಾನಕ್ಕಾಗಿ ಸಾವನ್ನಪ್ಪಿದ್ದ ಬಗ್ಗೆ ಶಂಕಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸಾವಿನ ಕಾರಣವನ್ನು ತನಿಖೆ ನಡೆಸಲು ನಿರ್ಧರಿಸಿ ಹುಲಿಗಳ ಅಂಗಾಂಗಗಳ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಳಿಕ ಕಾಡಿನ ಪ್ರಾಣಿಗಳಿಗೆ ವಿಷ ಹಾಕಲಾಗಿದೆ ಎಂದು ತಿಳಿದು ಬಂದಿತ್ತು.
ಹತ್ಯೆ ಬಯಲಿಗೆಳೆದ ಹಸು ನಾಪತ್ತೆ: ಕಳೆದೊಂದು ತಿಂಗಳಿನಿಂದ ನೀಲಗಿರಿ ಪ್ರದೇಶದಲ್ಲಿ 6 ಹುಲಿಗಳು ಸಾವಿಗೀಡಾಗಿವೆ. ಇದು ಅಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತು. ದಿಢೀರ್ ಆಗಿ ಹುಲಿಗಳು ಪ್ರಾಣ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣ ಏನೆಂಬುದನ್ನು ತಿಳಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದರು. ಆದರೆ, ಕಾರಣ ಮಾತ್ರ ತಿಳಿದು ಬಂದಿರಲಿಲ್ಲ. ತನಿಖೆಯ ವೇಳೆ ಕಾಡಿನಲ್ಲಿ ಹಸುವಿನ ಮೃತದೇಹವನ್ನು ಪತ್ತೆ ಮಾಡಲಾಗಿತ್ತು. ಇದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿತ್ತು.
ಸೇಕರ್ ಎಂಬಾತ ತನ್ನ ಹಸು ಕಾಣೆಯಾಗಿದೆ ಎಂದು ಕೆಲ ದಿನಗಳ ಹಿಂದೆ ಮಾಹಿತಿ ನೀಡಿದ್ದ. ಹಸು ಕಾಣೆಯಾದ ದಿನ ಮತ್ತು ಅದರ ಮಾಲೀಕ ನೀಡಿದ ದೂರಿನ ಬಗ್ಗೆ ಅನುಮಾನಿಸಿದ ಅಧಿಕಾರಿಗಳು ಇನ್ನಷ್ಟು ಜಾಲಾಡಿದಾಗ ಪ್ರಕರಣದ ತಿರುವು ಪಡೆದುಕೊಂಡಿದೆ.
ಹಸುವಿನ ದೇಹಕ್ಕೆ ವಿಷ ಹಾಕಿದ್ದ ಆರೋಪಿ: ಹಸುವನ್ನು ಹುಲಿಗಳು ಬೇಟೆಯಾಡಿದ ಕಾರಣಕ್ಕಾಗಿ ಕೋಪಗೊಂಡಿದ್ದ ಆರೋಪಿ ಸೇಕರ್ ಮೃತದೇಹದ ಮೇಲೆ ವಿಷ (ಕೀಟನಾಶಕ) ಹಾಕಿದ್ದ. ಇದಾದ ಬಳಿಕ ಎರಡು ಹುಲಿಗಳು ಹಸುವಿನ ಮಾಂಸವನ್ನು ತಿಂದ ಕಾರಣ ವಿಷ ದೇಹ ಸೇರಿ ಎರಡೂ ಸಾವನ್ನಪ್ಪಿವೆ. ಈ ಬಗ್ಗೆ ವಿಚಾರಣೆಯಲ್ಲಿ ಆರೋಪಿ ತಿಳಿಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹುಲಿಗಳ ಸಾವಿಗೆ ಕಾರಣನಾದ ಆರೋಪಿ ಸೇಕರ್ನನ್ನು ಬಂಧಿಸಿರುವ ಅರಣ್ಯಾಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ಮತ್ತು ಸ್ಥಳೀಯ ಅಧಿಕಾರಿಗಳು ಹುಲಿ ಬೇಟೆಯಾಡುವಿಕೆ ಮತ್ತು ಅವುಗಳ ಸಾವಿನ ಬಗ್ಗೆ ನಿಗಾ ವಹಿಸುತ್ತಿದ್ದಾರೆ.
ತಮಿಳುನಾಡಿನಲ್ಲಿ ಹುಲಿ ಸಂತತಿ ಹೆಚ್ಚಳ: ತಮಿಳುನಾಡಿನಲ್ಲಿ ಹುಲಿಗಳ ಸಂತತಿ ವ್ಯಾಪಕವಾಗಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಹುಲಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಈಚೆಗೆ ಹುಲಿ ದಿನದ ಅಂಗವಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII) ವರದಿಯನ್ನು ನೀಡಿತ್ತು. ತಮಿಳುನಾಡು ಕಾಡುಗಳಲ್ಲಿ 2006ರಲ್ಲಿ 76 ಹುಲಿಗಳಿದ್ದವು.
2018 ರ ಕೊನೆಯಲ್ಲಿ ನಡೆದಿದ್ದ ಹುಲಿ ಗಣತಿಯಲ್ಲಿ ತಮಿಳುನಾಡು ಅರಣ್ಯಗಳಲ್ಲಿ 264 ಹುಲಿಗಳಿರುವುದು ಕಂಡು ಬಂದಿತ್ತು. ಆದರೆ ಇತ್ತೀಚಿನ ಗಣತಿಯಲ್ಲಿ ಈ ಸಂಖ್ಯೆ 306 ಕ್ಕೆ ತಲುಪಿದೆ. ಅನಮಲೈ ಹುಲಿ ಸಂರಕ್ಷಿತ ಪ್ರದೇಶ, ಕಲಕ್ಕಾಡ್ -ಮುಂಡಂತುರೈ ಹುಲಿ ಸಂರಕ್ಷಿತ ಪ್ರದೇಶ (KMTR), ಮುದುಮಲೈ ಹುಲಿ ಸಂರಕ್ಷಿತ ಪ್ರದೇಶ (MTR), ಶ್ರೀವಿಲ್ಲಿಪುತ್ತೂರ್ ಮೇಗಮಲೈ ಹುಲಿ ಸಂರಕ್ಷಿತ ಪ್ರದೇಶ (SMTR) ಮತ್ತು ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶ (STR) ಹೀಗೆ ರಾಜ್ಯವು ಐದು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ.
ಇದನ್ನು ಓದಿ: Project Tiger: ತಮಿಳುನಾಡಿನ ಕಾಡುಗಳಲ್ಲಿರುವ ಹುಲಿಗಳ ಸಂಖ್ಯೆ 306; 16 ವರ್ಷಗಳಲ್ಲಿ ಸಂತತಿ 4 ಪಟ್ಟು ಹೆಚ್ಚಳ