ಚೆನ್ನೈ(ತಮಿಳುನಾಡು): ಕಳೆದ ಕೆಲ ದಿನಗಳ ಹಿಂದೆ ಭರ್ಜರಿ ಕಾರ್ಯಾಚರಣೆ ನಡೆಸಿ ಸಾವಿರ ವರ್ಷಗಳಷ್ಟು ಹಳೆಯದಾದ ಮತ್ತು ₹500 ಕೋಟಿ ಮೌಲ್ಯದ ಪಚ್ಚೆ ಶಿವಲಿಂಗವನ್ನು ವಶಕ್ಕೆ ಪಡೆದುಕೊಂಡಿದ್ದ ತಮಿಳುನಾಡು ಪೊಲೀಸರು ಇದೀಗ ಮತ್ತೊಮ್ಮೆ ಮಿಂಚಿನ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.
ತಮಿಳುನಾಡು ವಿಗ್ರಹ ಘಟಕದ ಸಿಐಡಿ ಪೊಲೀಸರು 40 ಕೋಟಿ ರೂ. ಮೌಲ್ಯದ ಪುರಾತನ ವಿಗ್ರಹ ವಶಕ್ಕೆ ಪಡೆದುಕೊಂಡಿದ್ದು, ಇದರಲ್ಲಿ ಚೋಳರ ಕಾಲದ ನಟರಾಜ, ರಾವಣ, ಪಾರ್ವತಿ ದೇವಿಯ ಪ್ರತಿಮೆ ಸೇರಿದಂತೆ ಅನೇಕ ಪ್ರಮುಖ ವಿಗ್ರಹಗಳಿವೆ.
ಇದನ್ನೂ ಓದಿ: ಸಾವಿರ ವರ್ಷ ಹಳೆಯ ₹500 ಕೋಟಿ ಮೌಲ್ಯದ 'ಶಿವಲಿಂಗ' ವಶಕ್ಕೆ ಪಡೆದ ಪೊಲೀಸರು
ತಮಿಳುನಾಡಿನ ಮಾಮಲ್ಲಪುರಂ ಪ್ರದೇಶದಲ್ಲಿ ಹಳೆ ವಿಗ್ರಹಗಳ ಅಕ್ರಮ ಸಾಗಾಟದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಪ್ರಾಚೀನ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ತಂಜಾವೂರಿನ ಅರುಳಾನಂದ ಬಡಾವಣೆಯ ವ್ಯಕ್ತಿಯೋರ್ವ ಪುರಾತನ ಕಾಲದ ವಿಗ್ರಹವನ್ನು ಬ್ಯಾಂಕ್ನಲ್ಲಿ ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರ ತಂಡ ಡಿಸೆಂಬರ್ 30ರಂದು ದಾಳಿ ನಡೆಸಿ, ಪಚ್ಚೆ ಶಿವಲಿಂಗ ವಶಕ್ಕೆ ಪಡೆದುಕೊಂಡಿದ್ದರು.