ಚೆನ್ನೈ( ತಮಿಳುನಾಡು): ಆಡಳಿತಾರೂಢ ಡಿಎಂಕೆ ಯುವ ವಿಭಾಗದ ಕಾರ್ಯದರ್ಶಿ ಮತ್ತು ಶಾಸಕ ಉದಯನಿಧಿ ಸ್ಟಾಲಿನ್ ಇಂದು ಬೆಳಗ್ಗೆ 9.30ಕ್ಕೆ ಚೆನ್ನೈನ ರಾಜಭವನದ ದರ್ಬಾರ್ ಹಾಲ್‌ನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಧಿಕೃತ ಪ್ರಕಟಣೆಯ ಪ್ರಕಾರ, ಉದಯನಿಧಿ ಅವರನ್ನು ತಮಿಳುನಾಡು ಕ್ಯಾಬಿನೆಟ್‌ನಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರನ್ನಾಗಿ ನೇಮಿಸಲಾಗಿದೆ.
ರಾಜ್ಯಪಾಲ ಆರ್.ಎನ್. ರವಿ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ಉದಯನಿಧಿ ಸ್ಟಾಲಿನ್ ಪ್ರಮಾಣ ವಚನ ಮತ್ತು ಗೌಪ್ಯತೆಯ ಪ್ರಮಾಣ ವಚನಕ್ಕೆ ಸಹಿ ಹಾಕಿದರು.
ತಂದೆ ಎಂಕೆ ಸ್ಟಾಲಿನ್ ಅವರ ಸಂಪುಟಕ್ಕೆ ಉದಯನಿಧಿ ಸ್ಟಾಲಿನ್ ಅವರ ಸೇರ್ಪಡೆಯನ್ನು ಸೂರ್ಯೋದಯದ ಕ್ಷಣವೆಂದು ಡಿಎಂಕೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಆದರೆ, ಇದು ಸೂರ್ಯೋದಯವಲ್ಲ, ಬದಲಾಗಿ ಇದು ಮಕ್ಕಳ ಉದಯ ಎಂದು ಪ್ರತಿಪಕ್ಷ ಟೀಕಿಸಿದೆ.
ದಿವಂಗತ ಸಿಎನ್ ಅಣ್ಣಾದೊರೈ ಅವರು ಸ್ಥಾಪಿಸಿದ ದ್ರಾವಿಡ ಪಕ್ಷವಾದ ಡಿಎಂಕೆ ದಶಕಗಳ ಇತಿಹಾಸ ಹೊಂದಿದೆ. ಪಕ್ಷವು ಪುತ್ರರು ಮತ್ತು ಪುತ್ರಿಯರನ್ನು ಪ್ರಮುಖ ಹುದ್ದೆಗಳಲ್ಲಿ ನೇಮಿಸುವ ಬಗ್ಗೆ ಡಿಎಂಕೆ ಪಕ್ಷವು ಯಾವುದೇ ತಪ್ಪಿತಸ್ಥ ಭಾವನೆಯನ್ನು ಹೊಂದಿಲ್ಲ ಎನ್ನುತ್ತಾರೆ ರಾಜಕೀಯ ವಿಮರ್ಶಕರು.
45 ವರ್ಷದ ನಟ - ನಿರ್ಮಾಪಕ ಉದಯನಿಧಿ ಅವರನ್ನು ಡಿಎಂಕೆ ಕಾರ್ಯಕರ್ತರು ಉದಯ ಸೂರ್ಯ ಎಂದು ಶ್ಲಾಘಿಸಿದ್ದಾರೆ. ಪಕ್ಷದ ಉದಯಿಸುತ್ತಿರುವ ಸೂರ್ಯನ ಚಿಹ್ನೆಯಂತೆ ಉದಯನಿಧಿ ಕೂಡ ಉದಯಸೂರ್ಯ ಎಂದು ಬಣ್ಣಿಸಿದ್ದಾರೆ.
ಸ್ಟಾಲಿನ್ ಸೇರ್ಪಡೆಯೊಂದಿಗೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರ ಸಂಖ್ಯೆ 34 ರಿಂದ 35 ಕ್ಕೆ ಏರಿದೆ.
ಇದನ್ನೂ ಓದಿ: ತಿರುವಣ್ಣಾಮಲೈನಲ್ಲಿ ಕಾರ್ತಿಗೈ ದೀಪಂ ಉತ್ಸವ ಸಂಭ್ರಮ: ಸಾವಿರಾರು ಭಕ್ತರು ಭಾಗಿ!