ನೀಲಗಿರಿ(ತಮಿಳುನಾಡು): ಇಲ್ಲಿನ ಅರಣ್ಯದ ಸುತ್ತಲಿನ ಗ್ರಾಮಗಳ ಸುಮಾರು ನಾಲ್ವರನ್ನು ಬಲಿ ಪಡೆದಿದ್ದ ಹುಲಿಗೆ ಅರವಳಿಕೆ ನೀಡಲಾಗಿದೆ ಎಂದು ತಮಿಳುನಾಡು ಅರಣ್ಯ ಇಲಾಖೆ ತಿಳಿಸಿದೆ.
ಈ ಹುಲಿಯನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು 20 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ವಾಘ್ರ ಯಾರ ಕಣ್ಣಿಗೂ ಬೀಳದಂತೆ ಓಡಾಡುತ್ತಿತ್ತು. ಹಲವು ದಿನಗಳ ಕಾರ್ಯಾಚರಣೆ ಬಳಿಕ ಮಸಿನಗುಡಿ ಅರಣ್ಯದಲ್ಲಿ ಟಿ-23 ಹುಲಿಗೆ ಯಶಸ್ವಿಯಾಗಿ ಅರವಳಿಕೆ ನೀಡಲಾಗಿದೆ. ಈಗ ಅರವಳಿಕೆ ಪಡೆದ ಹುಲಿಗೆ ಹುಡುಕಾಟ ಆರಂಭವಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಮಿಳುನಾಡು ಚೀಫ್ ವೈಲ್ಡ್ಲೈಫ್ ವಾರ್ಡನ್ ಶೇಖರ್ ಕುಮಾರ್ ನೀರಜ್ ಅವರು ಈ ಕುರಿತ ಆದೇಶವೊಂದನ್ನು ನೀಡಿದ್ದು, ಮೊದಲಿಗೆ ಹುಲಿ ಪತ್ತೆ ಮಾಡಲು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು.
ಇದಕ್ಕೂ ಮೊದಲು ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಹುಲಿಯನ್ನು ಕೊಲ್ಲದೇ ಜೀವಂತವಾಗಿ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿತ್ತು. ನೀಲಗಿರಿ ಜಿಲ್ಲೆಯ ಮಸಿನಗುಡಿ ಮತ್ತು ಸಿಂಗಾರ ಪ್ರದೇಶದಲ್ಲಿ ಈ ಹುಲಿಯು 4 ಜನರನ್ನು ಮತ್ತು 50ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಭಯೋತ್ಪಾದಕ ದಾಳಿ ಬಗ್ಗೆ ಗುಪ್ತಚರ ಮಾಹಿತಿ... ದೆಹಲಿಯಲ್ಲಿ ಹೈ ಅಲರ್ಟ್