ಕೋಯಿಕ್ಕೋಡ್: ಇತ್ತೀಚೆಗಷ್ಟೇ ನಿಫಾ ವೈರಸ್ ಹಾವಳಿಯಿಂದ ಚೇತರಿಸಿಕೊಂಡಿರುವ ಕೇರಳದಲ್ಲೀಗ ಮತ್ತೊಂದು ಸೋಂಕಿನ ಭೀತಿ ಎದುರಾಗಿದೆ. ನಿಫಾ ಸೋಂಕು ಕಾಣಿಸಿಕೊಂಡ ಕೋಯಿಕ್ಕೋಡ್ನ ಮಾರುತೋಂಕರದಲ್ಲಿ ಕಾಡು ಹಂದಿ ಸಾವನ್ನಪ್ಪಿದ್ದು, ಈ ಹಂದಿಯಲ್ಲಿ ಆಫ್ರಿಕನ್ ಸ್ವೈನ್ ಫೀವರ್ ಪತ್ತೆಯಾಗಿದೆ.
ಹಂದಿಯಲ್ಲಿ ಆಫ್ರಿಕನ್ ಹಂದಿ ಜ್ವರದ ಲಕ್ಷಣ ಇರುವುದನ್ನು ಭೋಪಾನ್ನ ವೈರಾಲಾಜಿ ಲ್ಯಾಬ್ ದೃಢಪಡಿಸಿದೆ. ಆಫ್ರಿಕನ್ ಹಂದಿ ಜ್ವರ ಇದೇ ಮೊದಲ ಬಾರಿಗೆ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಈ ವೈರಸ್ ನೇರವಾಗಿ ಮನುಷ್ಯರಲ್ಲಿ ರೋಗಕ್ಕೆನ್ನೂ ಕಾರಣವಾಗುವುದಿಲ್ಲ. ಈ ಸೋಂಕು ಕಂಡು ಬಂದ ನಿರ್ದಿಷ್ಟ ಕಿ.ಮೀ ಪ್ರದೇಶದೊಳಗೆ ಹಂದಿಗಳನ್ನು ಸಾಯಿಸಬೇಕು. ಪ್ರಸ್ತುತ ಈ ಪ್ರದೇಶದಲ್ಲಿ ಯಾವುದೇ ಹಂದಿ ಫಾರ್ಮ್ಗಳು ಕಂಡು ಬಂದಿಲ್ಲ.
ಕೇರಳ ಆರೋಗ್ಯ ಇಲಾಖೆ ಈ ಸಂಬಂಧ ಈ ಪ್ರದೇಶದ ಸುತ್ತಮುತ್ತಲಿನ ಫಾರ್ಮ್ಗಳ ಮಾಲೀಕರಿಗೆ ಜಾಗೃತಿ ಮೂಡಿಸಿದೆ. ಜಿಲ್ಲೆಯ ಎಲ್ಲ ಹಂದಿ ಫಾರ್ಮ್ಗಳ ಮಾಲೀಕರಿಗೆ ಕರೆ ನೀಡಿದ್ದು, ಈ ಸಂಬಂಧ ಜಿಲ್ಲೆಯ ಪಶು ಸಂಗೋಪನಾ ಆಸ್ಪತ್ರೆಯಲ್ಲಿ ಅಕ್ಟೋಬರ್ 6 ರಂದು ವಿವರವಾದ ಮಾಹಿತಿ ನೀಡುವ ಕ್ಲಾಸ್ ಅನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಆಫ್ರಿಕನ್ ಹಂದಿ ಜ್ವರ ಅಸ್ಫರ್ವಿರಿಡೆ ಎಂಬ ವೈರಸ್ ಕುಟುಂಬದಿಂದ ಬರುವ ಸೋಂಕು ಇದಾಗಿದೆ. ಈ ಸೋಂಕು ಸ್ಥಳೀಯ ಹಂದಿಗಳಲ್ಲಿ ಕಂಡು ಬಂದರೆ, ಈ ಪ್ರದೇಶದಲ್ಲಿರುವ ಹಂದಿಗಳ ಗುಂಪನ್ನು ಸಾಯಿಸಬೇಕಾಗುವುದು. 1907ರಲ್ಲಿ ಮೊದಲ ಬಾರಿಗೆ ಕೀನ್ಯಾದಲ್ಲಿ ಈ ಸೋಂಕು ಕಾಣಿಸಿಕೊಂಡಿತು. ಆಫ್ರಿಕಾದ ಕಾಡು ಹಂದಿಯಿಂದ ಬ್ರಿಟಿಷ್ ಕೊಲೊನಿಯಲ್ಲಿದ್ದ ಸ್ಥಳೀಯ ಹಂದಿಗೆ ಸೋಂಕು ತಗುಲಿತು.
ಈ ಸೋಂಕು ಐದು ದಶಕಗಳ ಕಾಲ ಆಫ್ರಿಕಾ ಖಂಡಕ್ಕೆ ಸೀಮಿತವಾಗಿದ್ದು, 1957ರಲ್ಲಿ ಯುರೋಪಿಗೂ ಹರಡಿತು. ಬಳಿಕ ಸ್ಪೈನ್, ಫ್ರಾನ್ಸ್, ಇಟಲಿ ಮತ್ತು ,ಮಾಲ್ಟಾಗೆ ಹರಡಿತು. ಬಳಿಕ ಅಮೆರಿಕಕ್ಕೆ ಕೂಡ ಬಂದಿತು. 1978ರಲ್ಲಿ ಯುರೋಪಿಯನ್ ದೇಶ ಮಾಲ್ಟಾದಲ್ಲಿ ಪತ್ತೆಯಾದ ಈ ಸೋಂಕು ತಡೆಗೆ ದೇಶದಲ್ಲಿನ ಎಲ್ಲ ಹಂದಿಗಳನ್ನು ಸಾಯಿಸುವ ಮೂಲಕ ಸೋಂಕಿನ ನಿರ್ಮೂಲನೆ ಮಾಡಲಾಯಿತು. 1960 ಮತ್ತು 1990ರ ಸಮಯದಲ್ಲಿ ಆಫ್ರಿಕನ್ ಹಂದಿ ಜ್ವರವು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ನಲ್ಲಿ ಹಂದಿ ಉದ್ಯಮಕ್ಕೆ ಭಾರೀ ಆರ್ಥಿಕ ನಷ್ಟವನ್ನು ಉಂಟುಮಾಡಿತು.
2018ರಲ್ಲಿ ಏಷ್ಯಾದ ಮುಖ್ಯ ಭೂಭಾಗದಲ್ಲಿ ಚೀನಾದ ಪೂರ್ವ ಪ್ರಾಂತ್ಯದ ಲಿಯಾನಿಂಗ್‌ನಲ್ಲಿನ ಹಂದಿ ಸಾಕಣೆ ಕೇಂದ್ರದಲ್ಲಿ ಮೊದಲ ಬಾರಿಗೆ ಈ ರೋಗವನ್ನು ಪತ್ತೆ ಮಾಡಲಾಯಿತು. ನಂತರ ರೋಗವು ಹಾಂಕಾಂಗ್, ಫಿಲಿಪ್ಪಿನ್ಸ್, ವಿಯೆಟ್ನಾಂ, ಥಾಯ್ಲೆಂಡ್, ಪೂರ್ವ ಟಿಮೋರ್, ದಕ್ಷಿಣ ಕೊರಿಯಾ, ಕಾಂಬೋಡಿಯಾ, ಮಂಗೋಲಿಯಾ, ಮ್ಯಾನ್ಮಾರ್ ಮತ್ತು ಲಾವೋಸ್ ಸೇರಿದಂತೆ ಎಲ್ಲ ಆಗ್ನೇಯ ಏಷ್ಯಾದ ದೇಶಗಳಿಗೆ ವ್ಯಾಪಕವಾಗಿ ಹರಡಿತು.
2020ರಲ್ಲಿ ಮೇ 21ರಂದು ಮೊದಲ ಬಾರಿಗೆ ಭಾರತದಲ್ಲಿ ಈ ರೋಗ ಪತ್ತೆಯಾಯಿತು. ಅಸ್ಸೋಂ ಮತ್ತು ಅರುಣಾಚಲ ಪ್ರದೇಶದಲ್ಲಿ ಈ ಹಂದಿ ಜ್ವರ ಕಾಣಿಸಿಕೊಂಡಿತು. ಕೇರಳದಲ್ಲಿ 2022ರಲ್ಲಿ ಜುಲೈ 21ರಂದು ಕೇರಳಕ್ಕೆ ಈ ಸೋಂಕು ಹರಡಿತು. ವಯನಾಡ್ ಜಿಲ್ಲೆಯ ತವಿಂಜಲ್ ಜಮೀನೊಂದರಲ್ಲಿ ಈ ರೋಗ ಪತ್ತೆಯಾಯಿತು.
ಇದನ್ನೂ ಓದಿ: ಆಫ್ರಿಕನ್ ಹಂದಿ ಜ್ವರ ಹಾವಳಿ: 1 ಸಾವಿರ ಹಂದಿಗಳ ಹತ್ಯೆ.. ಎಲ್ಲೆಡೆ ಮುನ್ನೆಚ್ಚರಿಕೆ!