ನಾಗ್ಪುರ: ಮಹಾರಾಷ್ಟ್ರದಲ್ಲಿ ಹಂದಿ ಜ್ವರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ವಿಭಾಗೀಯ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ನಗರದಲ್ಲಿ 200ಕ್ಕೂ ಹೆಚ್ಚು ಹಂದಿ ಜ್ವರ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ ತಿಂಗಳಿನಲ್ಲಿ ಒಟ್ಟು 10 ಮಂದಿ ಇದರಿಂದ ಸಾವಿಗೀಡಾಗಿದ್ದಾರೆ.
ಅಂಕಿಅಂಶಗಳ ಪ್ರಕಾರ, ನಗರದಲ್ಲಿ 129 ಜನರು ಮತ್ತು ಗ್ರಾಮೀಣ ಪ್ರದೇಶದಲ್ಲಿ 82 ಜನರು ಹಂದಿ ಜ್ವರದಿಂದ ಬಳಲುತ್ತಿದ್ದಾರೆ. ಇದೀಗ ನಗರದಲ್ಲಿ 42 ಹಾಗೂ ಗ್ರಾಮೀಣ ಪ್ರದೇಶದಲ್ಲಿ 57 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಸಕಾಲದಲ್ಲಿ ರೋಗಿಗಳನ್ನು ದಾಖಲು ಮಾಡಿಕೊಳ್ಳುವುದರಿಂದ ಹೆಚ್ಚಿನ ಅಪಾಯವನ್ನು ತಪ್ಪಿಸಬಹುದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತ್ರಿಪುರದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ.. 63 ಹಂದಿಗಳು ಸಾವು
ಆರೋಗ್ಯ ಇಲಾಖೆ ಪ್ರತಿ ವಾರ ಹಂದಿ ಜ್ವರ ಪ್ರಕರಣಗಳ ಪರಿಶೀಲನಾ ಸಭೆ ನಡೆಸುತ್ತಿದೆ. ಆಗಸ್ಟ್ 19 ರಂದು ನಡೆದ ಸಭೆಯಲ್ಲಿ, ಹಂದಿ ಜ್ವರ ಹರಡುವುದನ್ನು ನಿಯಂತ್ರಿಸಲು ಸುರಕ್ಷತಾ ಮಾನದಂಡಗಳನ್ನು ಕೈಗೊಳ್ಳುವುದರ ಬಗ್ಗೆ ವೈದ್ಯರು ಚರ್ಚಿಸಿದರು. ಕೈಗಳನ್ನು ಸಾಬೂನಿನಿಂದ ತೊಳೆಯಬೇಕು ಮತ್ತು ಜನಸಂದಣಿ ಇರುವ ಸ್ಥಳಗಳಿಗೆ ಹೋಗದಂತೆ ವೈದ್ಯರು ಸಲಹೆ ನೀಡಿದ್ದಾರೆ.