ನವದೆಹಲಿ: ಮದುವೆ ಎಂದರೆ ಅಲ್ಲಿ ಸಂಭ್ರಮ. ಈ ಸಂಭ್ರಮದ ಮೆರುಗು ಹೆಚ್ಚಿಸುವಂತೆ ಮಾಡುವುದು ಮದುಮಗನ ಮೆರವಣಿಗೆ. ಈ ಅದ್ದೂರಿ ಮೆರವಣಿಗೆಯಲ್ಲಿ ಮದುಮಗನ ಕೊರಳಿಗೆ ಕೇವಲ ಹೂವಿನ ಹಾರ ಮಾತ್ರವಲ್ಲದೇ, ದುಡ್ಡಿನ ಹಾರವನ್ನೇ ಹಾಕಿ ಸಂತಸ ಪಡುತ್ತಾರೆ. ಈ ದುಡ್ಡಿನ ಹಾರದ ಮೇಲೆ ಕಣ್ಣು ಹಾಕಿದ ಇಬ್ಬರು ಸ್ವಿಗ್ಗಿ ಡೆಲಿವರಿ ಬಾಯ್ಸ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಘಟನೆಯ ವಿವರ: ಮದುಮಗನ ಕೊರಳಲಿದ್ದ 10 ಸಾವಿರ ರೂಪಾಯಿ ನೋಟಿನ ಹಾರವನ್ನು ಜಸ್ಮೀತ್ ಸಿಂಗ್ ಮತ್ತು ರಾಕೀವ್ ಮೆಹ್ತೊ ಎಂಬುವವರು ಕದ್ದಿದ್ದು, ಅವರನ್ನು ಜಗತ್ಪುರಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಇಬ್ಬರು ಆರೋಪಿಗಳು ಗೀತಾ ಕಾಲೊನಿ ನಿವಾಸಿಗಳಾಗಿದ್ದಾರೆ. ಘಟನೆ ಕುರಿತು ಮಾತನಾಡಿರುವ ಡಿಸಿಪಿ ರೋಹಿತ್ ಮೀನಾ, ’’ಜನವರಿ 31ರಂದು ಜಗತ್ಪುರಿ ಪೊಲೀಸ್ ಠಾಣೆಯಲ್ಲಿ ವರನ ಮಾಲೆ ಕಿತ್ತು ಪರಾರಿಯಾಗಿರುವ ಸಂಬಂಧ ದೂರ ದಾಖಲಾಗಿತ್ತು. ಈ ಸಂಬಂಧ ಮಾಹಿತಿ ಪಡೆದ ತಕ್ಷಣ ಜಗತ್ಪುರಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಅನು ಗುಪ್ತಾ ಅವರ ಮದುವೆ ಸ್ಟಾರ್ ಪ್ಲೇಸ್ನಲ್ಲಿ ನಡೆಯಬೇಕಿತ್ತು. ಮದುವೆ ಮಂಟಪಕ್ಕೆ ವರನನ್ನು ಮೆರವಣಿಗೆ ಮೂಲಕ ಕರೆತರಲಾಗುತ್ತಿತ್ತು. ಈ ವೇಳೆ, ಆತನಿಗೆ ಐದುನೂರು ರೂಪಾಯಿ ನೋಟಿನ ಹಾರವನ್ನು ಹಾಕಲಾಗಿತ್ತು. ಈ ನೋಟಿನ ಹಾರವನ್ನು ಕಿತ್ತುಕೊಂಡು ಇಬ್ಬರು ಪರಾರಿಯಾಗಿದ್ದರು. ನೋಟಿನ ಹಾರ ಕಿತ್ತುಕೊಂಡ ಇಬ್ಬರು ಆರೋಪಿಗಳು ಸ್ಕೂಟಿ ಮೂಲಕ ತಪ್ಪಿಸಿಕೊಂಡಿದ್ದರು‘‘ ಎಂದು ವರನ ಸಹೋದರ ಅಂಕಿತ್ ಗುಪ್ತಾ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ವರನ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶಿಸಲಾಯಿತು. ಈ ಸಂಬಂಧ ಅಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಲಾಗಿದೆ. ಪ್ರಕರಣ ಸಂಬಂಧ ಸುತ್ತಮುತ್ತಲಿದ್ದ 80 ಸಿಸಿಟಿವಿ ಗಳನ್ನು ಪರಿಶೀಲನೆ ನಡೆಸಿ, ಸ್ಕೂಟಿಯ ಸುಳಿವನ್ನು ಕೂಡಾ ಪತ್ತೆ ಮಾಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫೋನ್ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್: ದೆಹಲಿಯಲ್ಲಿ ವರನ ಕುತ್ತಿಗೆಯಲ್ಲಿ ದುಡ್ಡಿನ ಹಾರ ಕದ್ದರೆ, ಮುಂಬೈನ ಮಲಡ್ ಪ್ರದೇಶ ಅಶೋಕ ಎನ್ಕ್ಲೇವ್ಗೆ ಬಂದ ಸ್ವಿಗ್ಗಿ ಡೆಲಿವರಿ ಬಾಯ್ ಮೊಬೈಲ್ ಕದ್ದಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಫೆ 14ರಂದು ಸಂಜೆ 6.45ರ ಸುಮಾರಿಗೆ ಬಂದ ವಿನಯನ್ ಎಂಬ ಡೆಲಿವರಿ ಬಾಯ್, ಶೂ ರ್ಯಾಕ್ ಮೇಲೆ ಇಟ್ಟಿದ್ದ ಮೊಬೈಲ್ ಕದ್ದುಕೊಂಡು ಹೋಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.
ಏನಿದು ಘಟನೆ: ಡೆಲಿವರಿ ಪಡೆದ ಮಹಿಳೆ ಶೂರ್ಯಾಕ್ ಮೇಲೆ ಮೊಬೈಲ್ ಅನ್ನು ಇಟ್ಟಿದ್ದರು. ಬಳಿಕ ಮೊಬೈಲ್ ಮರೆತು ಒಳ ಹೋಗಿದ್ದಾರೆ. ಕೆಲವು ಹೊತ್ತಿನ ನಂತರ ಅವರು ಬಂದು ನೋಡಿದಾಗ ಮೊಬೈಲ್ ಕಂಡು ಬಂದಿರಲಿಲ್ಲ. ಈ ವೇಳೆ, ಮಹಿಳೆ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಮೊಬೈಲ್ ಅನ್ನು ತೆಗೆದುಕೊಂಡು ಹೋಗಿರುವುದು ಪತ್ತೆಯಾಗಿದೆ ಎಂದು ಮಹಿಳೆ ಆರೋಪಿಸಿ, ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂದ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕನ ವಿಚಾರಣೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದರು.
ಇದನ್ನೂ ಓದಿ: ಬೀದರ್ ಕೆಕೆಆರ್ಟಿಸಿ ಡಿಪೋದಲ್ಲಿ ಬಸ್ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ.. ಬಸ್ಗಾಗಿ ತೀವ್ರ ಶೋಧ!