ಮುಂಬೈ: ಸಾಧಿಸುವ ಅಚಲ ವಿಶ್ವಾಸ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇದೊಂದು ಸುದ್ದಿ ನಿದರ್ಶನ. ಹಿಂದೊಮ್ಮೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಸ ಗುಡಿಸುತ್ತಿದ್ದ ಮಹಿಳೆ ಇಂದು ಸತತ ಪರಿಶ್ರಮದಿಂದ ಸರ್ಕಾರಿ ಬ್ಯಾಂಕೊಂದರಲ್ಲಿ ಉನ್ನತ ಹುದ್ದೆಗೇರಿ ಮಾದರಿಯಾಗಿದ್ದಾರೆ.
ಈ ಸಾಧಕಿಯ ಹೆಸರು ಪ್ರತೀಕ್ಷಾ ತೊಂಡ್ವಾಲ್ಕರ್. ಪುಣೆಯಲ್ಲಿ ಜನಿಸಿದ ಈ ಮಹಿಳೆ ಅತ್ಯಂತ ಬಡ ಹಿನ್ನೆಲೆಯಿಂದ ಬಂದವರು. ಇದೇ ಕಾರಣಕ್ಕೆ ಓದು ಮುಂದುವರಿಸಲಾಗದೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಪತಿ ಜೊತೆ ಮುಂಬೈಗೆ ಬಂದು ನೆಲೆಸಿದ್ದರು. ಆ ಸಂದರ್ಭದಲ್ಲಿ ಪತಿ ಎಸ್‌ಬಿಐನ ಮುಂಬೈ ಶಾಖೆಯಲ್ಲಿ ಬುಕ್ ಬೈಂಡರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ 1984 ರಲ್ಲಿ ಅವರು ನಿಧನರಾದರು. ಬದುಕು ಕೊಟ್ಟ ಬಹುದೊಡ್ಡ ಹೊಡೆತದಿಂದ ಕಂಗೆಡದ ಪ್ರತೀಕ್ಷಾ ತೊಂಡ್ವಾಲ್ಕರ್ ಬಳಿಕ ಸತತ ಪರಿಶ್ರಮದಿಂದ ಶಿಕ್ಷಣ ಮುಂದುವರೆಸಿ ಸರ್ಕಾರಿ ಬ್ಯಾಂಕ್‌ನಲ್ಲಿ ನೌಕರಿ ಪಡೀತಾರೆ. ಇದೀಗ ಸೇವೆಯುದ್ದಕ್ಕೂ ಬಡ್ತಿ ಪಡೆದು ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆ ತಲುಪಿದ್ದಾರೆ. ಆದರೆ, ಈ ಸ್ಥಾನಕ್ಕೇರಲು ಅವರು ಸವೆಸಿದ ಹೇಗಿತ್ತು ನೋಡಿ..
ಪತಿ ನಿಧರಾದಾಗ ಇವರಿಗೆ ಕೇವಲ 20 ವರ್ಷ ವಯಸ್ಸು. ಆಗಲೇ ಇಬ್ಬರು ಮಕ್ಕಳೂ ಇದ್ದರು. ಪತಿ ಸಾವಿನ ನಂತರ ಇವರಿಗೆ ದಿಕ್ಕೇ ತೋಚದಂತಾಗಿತ್ತಂತೆ. ತಾನು 7ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದ ಕಾರಣಕ್ಕೆ ಧುತ್ತಂದು ಎದುರಾಗಿದ್ದೇ ಉದ್ಯೋಗದ ಪ್ರಶ್ನೆ. ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಾಗ ಪತಿ ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿ ಕಸ ಶುಚಿಗೊಳಿಸುವ ಕೆಲಸಕ್ಕೆ ಸೇರ್ತಾರೆ. ಹೀಗೆ ಕೆಲಸ ಮಾಡುವಾಗ ಶಿಕ್ಷಣ ಮುಂದುವರೆಸುವ ಮನಸ್ಸು ಮಾಡ್ತಾರೆ. ಕಸ ಗುಡಿಸುವ ಉದ್ಯೋಗ ಮತ್ತು ಮನೆಯ ಜೊತೆಗೆ ಶಿಕ್ಷಣವನ್ನೂ ಮುಂದುವರೆಸಿದರು. 10ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಪದವಿ ಪೂರ್ಣಗೊಳಿಸಲು ಮುಂಬೈನ ಎಸ್‌ಎನ್‌ಡಿಟಿ ಕಾಲೇಜು ಸೇರಿದ್ದರು. ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದು ಮೊದಲು ಕ್ಲರ್ಕ್ ಆಗಿ ಬ್ಯಾಂಕಿಗೆ ಸೇರಿದ್ದಾರೆ. ಆದರೆ, ಕ್ಲರ್ಕ್ ಆಗಿ ಕೆಲಸ ಮಾಡುತ್ತಲೇ ಉನ್ನತ ಹುದ್ದೆಗಳ ಪರೀಕ್ಷೆಗಾಗಿ ಓದು ಮುಂದುವರಿಸುವುದನ್ನು ಕೈ ಬಿಡಲಿಲ್ಲ.
ಕಾಲಕಾಲಕ್ಕೆ ನಡೆಯುವ ಬ್ಯಾಂಕ್ನ ಆಂತರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರದಲ್ಲಿ ಮೊದಲು ತರಬೇತಿ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಆ ನಂತರ ಪ್ರತಿ ಹುದ್ದೆಯಲ್ಲಿಯೂ ಬಡ್ತಿ ಪಡೆದು ಇಂದು ಬಾಂದ್ರಾದ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ!.
ಇದನ್ನೂ ಓದಿ: ನಾಳೆ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ; ಫಡ್ನವೀಸ್ಗೆ ಗೃಹ ಖಾತೆ?