ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ತಿಲಕ್ ನಗರದಲ್ಲಿ 87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸೆಗಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮನೆಗಳ್ಳತನಕ್ಕೆ ಎಂದು ಬಂದಿದ್ದ ವ್ಯಕ್ತಿ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯಿಂದ ಕಳ್ಳತನವಾದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಲ್ಲೇ ಹತ್ತಿರದ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ. ಘಟನೆ ನಡೆದ ಕೂಡಲೇ ಆರೋಪಿ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ಬಗ್ಗೆ ಸುಳಿವು ಸಿಕ್ಕಿದೆ. ಘಟನೆ ನಡೆದ 16 ಗಂಟೆಯಲ್ಲಿ ನಾವು ಆರೋಪಿಯನ್ನು ಪತ್ತೆ ಮಾಡಿದ್ದೇವೆ ಮತ್ತು ಪ್ರಕರಣವನ್ನು ಭೇದಿಸಿದ್ದೇವೆ ಎಂದು ಹೆಚ್ಚುವರಿ ಡಿಸಿಪಿ (ಪಶ್ಚಿಮ) ಪ್ರಶಾಂತ್ ಗೌತಮ್ ಹೇಳಿದ್ದಾರೆ.
ಇದನ್ನೂ ಓದಿ: ಒಂದು ದಿನ ಮೊದಲು ಫೋನ್ ಕಳ್ಳತನ, ಮರುದಿನ 87 ವರ್ಷದ ವೃದ್ಧೆ ಮೇಲೆ ಅತ್ಯಾಚಾರ
ಸೋಮವಾರ, ಪಶ್ಚಿಮ ದೆಹಲಿಯಲ್ಲಿ ವೃದ್ಧೆಯ ಮೇಲೆ ನಡೆದ ಅತ್ಯಾಚಾರದ ಘಟನೆಯ ತನಿಖೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಪೊಲೀಸರ ಪ್ರಕಾರ, ಆರಂಭದಲ್ಲಿ ತಿಲಕ್ ನಗರದ ಮನೆಯೊಂದರಿಂದ ಮೊಬೈಲ್ ಫೋನ್ ಕಳ್ಳತನವಾಗಿದೆ ಎಂದು ಭಾನುವಾರ ಹಿರಿಯ ನಾಗರಿಕರೊಬ್ಬರ ಮಗಳಿಂದ ಲಿಖಿತ ದೂರು ಬಂದಿದ್ದು, ನಂತರ ಎಫ್ಐಆರ್ ದಾಖಲಿಸಲಾಗಿದೆ.
ಬಳಿಕ ಕಳ್ಳತನ ನಡೆದ ಮನೆಯ ಹಿರಿಯ ನಾಗರಿಕರ ಮೇಲೂ ಅತ್ಯಾಚಾರವೆಸಗಲಾಗಿದೆ ಎಂದು ದೂರುದಾರರು ಸೋಮವಾರ ವರದಿ ಮಾಡಿದ್ದಾರೆ. ಸೆಕ್ಷನ್ 323 ಮತ್ತು 376 (ಅತ್ಯಾಚಾರಕ್ಕೆ ಶಿಕ್ಷೆ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.