ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಇಲ್ಲಿನ ದಿನಾಜ್ಪುರ ಜಿಲ್ಲೆಯ ಪಟ್ಟಣವೊಂದರಲ್ಲಿ ಕಳೆದ ವಾರ ಬಾಲಕಿ ಶವ ಪತ್ತೆಯಾದ ನಂತರ ಉದ್ರಿಕ್ತಗೊಂಡ ಸ್ಥಳೀಯರು ಕಲಿಯಗಂಜ್ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದರು. ಇದರ ನಂತರ ಇಲ್ಲಿನ ಬುಡಕಟ್ಟು ಯುವಕನನ್ನು ಪೊಲೀಸರು ಕೊಂದಿದ್ದಾರೆ ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಅವರು ಆರೋಪಿಸಿದ್ದಾರೆ.
ಏಪ್ರಿಲ್ 27 ರಂದು ಮುಂಜಾನೆ 2.30 ಕ್ಕೆ ಬಿಜೆಪಿ ಪಂಚಾಯತ್ ಸಮಿತಿ ಸದಸ್ಯ ಬಿಷ್ಣು ಬರ್ಮನ್ ಅವರ ಮನೆ ಮೇಲೆ ಬಂಗಾಳ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ. ದಾಳಿಯ ನಂತರ ಪೊಲೀಸರು 33 ವರ್ಷದ ಮೃತ್ಯುಂಜಯ್ ಬರ್ಮನ್‌ನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ನಿನ್ನೆ ರಾತ್ರಿ ಪೊಲೀಸ್ ದಾಳಿ ವೇಳೆ ಸ್ಥಳೀಯರು ಪೊಲೀಸರನ್ನು ಸುತ್ತುವರಿದು ಸಿಬ್ಬಂದಿಯೊಬ್ಬರಿಗೆ ಥಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಮ್ಮನ್ನು ರಕ್ಷಿಸಿಕೊಳ್ಳಲು ಪೊಲೀಸ್ ಅಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಲ್ಲದೇ ನಂತರ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಯುವಕ ಪೊಲೀಸರ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆಯೇ ಅಥವಾ ಇಲ್ಲವೇ ಎಂಬುದು ದೃಢಪಟ್ಟಿಲ್ಲ. ಈ ಕುರಿತು ವಿಚಾರಣೆ ಆರಂಭಿಸಲಾಗಿದೆ ಎಂದಿದ್ದಾರೆ.
ಕಳೆದ ವಾರ ಬಂಗಾಳದ ಕಾಲಿಗಂಜ್‌ನ ಕಾಲುವೆಯ ಬಳಿ ಶವವಾಗಿ ಪತ್ತೆಯಾದ ಹದಿಹರೆಯದ ಬಾಲಕಿ ಸಾವಿಗೆ ಸಂಬಂಧಿಸಿದಂತೆ ನಿನ್ನೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಯ ನಂತರ ಪೊಲೀಸರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ನಾವು ಸಂತ್ರಸ್ತ ಕುಟುಂಬದ ಪರ ನಿಲ್ಲುತ್ತೇವೆ: ಮಂಗಳವಾರ ನಡೆದ ಹಿಂಸಾಚಾರ ಮತ್ತು ಅಗ್ನಿಸ್ಪರ್ಶ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬುಧವಾರ ಭರವಸೆ ನೀಡಿದ್ದರು. 'ನಾವು ಸಂತ್ರಸ್ತ ಕುಟುಂಬದ ಪರವಾಗಿ ನಿಲ್ಲುತ್ತೇವೆ. ಆದರೆ ನಿನ್ನೆ ಗೂಂಡಾಗಿರಿ ನಡೆದ ರೀತಿ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿ ಆಸ್ತಿಪಾಸ್ತಿಗೆ ಹಾನಿ ಮಾಡಿದ ಘಟನೆಗಳ ಬಗ್ಗೆಯೂ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಹೇಳುತ್ತೇನೆ ಎಂದು ಅವರು ತಿಳಿಸಿದರು.
ಮಾಲ್ಡಾದಲ್ಲಿ ಅಪ್ರಾಪ್ತೆ ಶವಪತ್ತೆ : ಪಶ್ಚಿಮ ಬಂಗಾಳದಲ್ಲಿ ಮಾಲ್ಡಾ ಜಿಲ್ಲೆಯ ಜಮೀನಿನಲ್ಲಿ ಮಂಗಳವಾರ (ಏಪ್ರಿಲ್ 25-2023)ರ ಬೆಳಗ್ಗೆ ಅಪ್ರಾಪ್ತೆಯ ಶವ ಪತ್ತೆಯಾಗಿತ್ತು. ಹದಿಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ದೇಹದ ಮೇಲೆ ಕಂಡುಬಂದ ಹಲವು ಗುರುತುಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಯಾಗಿರುವುದನ್ನು ಸೂಚಿಸುತ್ತವೆ ಎಂದು ಅವರು ಹೇಳಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಕಾಲಿಯಾಚಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಉದಯಶಂಕರ್ ಘೋಷ್ ಸ್ಥಳಕ್ಕೆ ಧಾವಿಸಿದ್ದರು. ಅವರನ್ನು ಕಲಿಯಾಚಾಕ್ ಎಸ್‌ಡಿಪಿಒ ಸಂಭವ್ ಜೈನ್ ಅನುಸರಿಸಿದ್ದರು. ಸದ್ಯ ಕಾಲಿಯಾಚಕ್ ಪೊಲೀಸ್ ಠಾಣೆಯ ಸಿಬ್ಬಂದಿ ಮೃತದೇಹವನ್ನು ವಶಪಡಿಸಿಕೊಂಡು ಶವಪರೀಕ್ಷೆಗಾಗಿ ಮಾಲ್ಡಾ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದರು.
ಬಾಲಕಿಯನ್ನು ಕತ್ತು ಹಿಸುಕಿ ಸಾಯಿಸಿರುವುದಾಗಿ ಗ್ರಾಮಸ್ಥರ ಶಂಕೆ: ಸ್ಥಳೀಯ ಮೂಲಗಳ ಪ್ರಕಾರ, ಗ್ರಾಮದ ಕೆಲವು ರೈತರು ಮಂಗಳವಾರ ಬೆಳಗ್ಗೆ ಜಮೀನಿನಲ್ಲಿ ಸಾಗುವಳಿ ಮಾಡಲು ತೆರಳಿದ್ದರು. ಸುಮಾರು 15 ವರ್ಷ ವಯಸ್ಸಿನ ಬಾಲಕಿಯ ಶವವನ್ನು ಲುಫಾ ತೋಟದಲ್ಲಿ ಬಿದ್ದಿರುವುದನ್ನು ಅವರು ಮೊದಲು ಗುರುತಿಸಿದ್ದರು. ಸುದ್ದಿ ತಿಳಿದ ಗ್ರಾಮದ ಎಲ್ಲರೂ ಸ್ಥಳಕ್ಕೆ ಧಾವಿಸಿದ್ದರು. ಮುಖ ಸೇರಿದಂತೆ ದೇಹದ ಖಾಸಗಿ ಭಾಗಗಳಲ್ಲಿ ಹಲವು ಗೀರುಗಳು ಕಂಡುಬಂದ್ದಿದ್ದವು. ನಂತರ ಗ್ರಾಮಸ್ಥರು ಸಾಮೂಹಿಕ ಅತ್ಯಾಚಾರದ ನಂತರ ಬಾಲಕಿಯನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ ಎಂದು ಊಹಿಸಿದ್ದರು. ನಂತರ ಅವರು ಕಾಲಿಯಾಚಕ್ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದರು.
ಇದನ್ನೂ ಓದಿ : ಮಾಲ್ಡಾದಲ್ಲಿ ಅಪ್ರಾಪ್ತೆ ಶವಪತ್ತೆ.. ಅತ್ಯಾಚಾರದ ನಂತರ ಕೊಂದಿರುವ ಶಂಕೆ