ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ಸಂಸದ ಅಧೀರ್ ರಂಜನ್ ಚೌಧರಿ ಅವರನ್ನು ಕೆಳಮನೆಯಿಂದ ಅಮಾನತುಗೊಳಿಸಿರುವ ಸಂಬಂಧ ಸಂಸತ್ತಿನ ವಿಶೇಷಾಧಿಕಾರ ಸಮಿತಿಯ ಮುಂದೆ ಬುಧವಾರ ಹಾಜರಾಗಲಿದ್ದಾರೆ.
ಮಳೆಗಾಲ ಅಧಿವೇಶನದ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಅಡ್ಡಿಪಡಿಸುವ ವರ್ತನೆಯನ್ನು ಉಲ್ಲೇಖಿಸಿ ಚೌಧರಿ ಅವರನ್ನು ಅಮಾನತುಗೊಳಿಸುವಂತೆ ಕೋರಿ ಪ್ರಸ್ತಾವನೆಯನ್ನು ಮಂಡಿಸಿದ್ದರು. ಈ ತಿಂಗಳ ಆರಂಭದಲ್ಲಿ ಮಾನ್ಸೂನ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಂಪುಟದ ಸದಸ್ಯರು ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅವರು ಅಡ್ಡಿಪಡಿಸುವ ವರ್ತನೆಯನ್ನು ತೋರಿದರು ಎಂದು ಆರೋಪಿಸಲಾಗಿದೆ.
ಚೌಧರಿ ಅವರನ್ನು ಕೆಳಮನೆಯಿಂದ ಅಮಾನತುಗೊಳಿಸುವ ನಿರ್ಣಯವನ್ನು ಧ್ವನಿ ಮತದಿಂದ ಅಂಗೀಕರಿಸಲಾಗಿತ್ತು. ಸಂಸದೀಯ ಸಮಿತಿಯು ಚೌಧರಿ ಅವರನ್ನು ಅಮಾನತುಗೊಳಿಸಿರುವ ಕುರಿತು ನೀಡಿರುವ ಹೇಳಿಕೆಯನ್ನು ಪರಿಶೀಲಿಸಿ ಸಮಿತಿಯ ಅಧ್ಯಕ್ಷರ ಮೂಲಕ ಸದನಕ್ಕೆ ವರದಿ ಸಲ್ಲಿಸಲಿದೆ. ಜಾರ್ಖಂಡ್‌ನ ಬಿಜೆಪಿ ಸಂಸದ ಸುನೀಲ್ ಸಿಂಗ್ ಅವರು ವಿಶೇಷಾಧಿಕಾರ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ವಿಷಯದಲ್ಲಿ ಸಂಸದರನ್ನು ಅಮಾನತುಗೊಳಿಸುವ ಯಾವುದೇ ಸಂದರ್ಭದಲ್ಲಿ ಗರಿಷ್ಠ ದಿನಗಳನ್ನು ತೆಗೆದುಕೊಳ್ಳಲು ಸಮಿತಿಯು ಇಚ್ಛಿಸುವುದಿಲ್ಲ. ಕಾಲಮಿತಿಯಲ್ಲಿ ವಿಚಾರಣೆ ನಡೆಸಿ ಶೀಘ್ರವೇ ವರದಿ ಸಲ್ಲಿಸಲಿದೆ ಎಂದು ಸುನೀಲ್ ಸಿಂಗ್ ತಿಳಿಸಿದ್ದಾರೆ.
ಅಧೀರ್ ರಂಜನ್ ಚೌಧರಿ ಅವರನ್ನು ಅಮಾನತುಗೊಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಲೋಕಸಭೆಯ ವಿಶೇಷಾಧಿಕಾರಗಳ ಸಮಿತಿಯು ಈ ತಿಂಗಳ 18 ರಂದು ತನ್ನ ಮೊದಲ ಸಭೆಯಲ್ಲಿ, ಅಧೀರ್ ರಂಜನ್ ಚೌಧರಿ ಅವರ ವಿರುದ್ಧದ ಆರೋಪಗಳ ಬಗ್ಗೆ ತಮ್ಮ ವಾದವನ್ನು ಮಂಡಿಸಲು ಅವಕಾಶವನ್ನು ನೀಡಲು ನಿರ್ಧರಿಸಿತ್ತು. ಈ ಸಮಿತಿಯು ಅವರಿಗೆ ಆಗಸ್ಟ್ 30 ರ ದಿನಾಂಕವನ್ನು ನೀಡಿತ್ತು. ಸಮಿತಿಯ ಸಭೆಗೆ ಬಂದು ತಮ್ಮ ವಾದವನ್ನು ಮಂಡಿಸಲು ಅವರಿಗೆ ಸೂಚಿಸಲಾಗಿತ್ತು.
ಅಧೀರ್ ರಂಜನ್ ಚೌಧರಿ ಹೇಳಿದ್ದು ಹೀಗೆ: "ನನ್ನನ್ನು ಗಲ್ಲಿಗೇರಿಸಿದ ಬಳಿಕ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ನಾನು ಅಸಂಸದೀಯವಾದ ಯಾವುದನ್ನೂ ಹೇಳಿಲ್ಲ. 'ನೀರವ್' ಎಂಬುದು ಹಿಂದಿ ಪದ. ಇದನ್ನು ಜನತೆ ತಮ್ಮ ದೈನಂದಿನ ಮಾತುಗಳಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ. ಅವರು (ಬಿಜೆಪಿ) ಸಣ್ಣ ವಿಷಯವನ್ನು ಬೆಟ್ಟ ಮಾಡಲು ಪ್ರಯತ್ನಿಸುತ್ತಿದ್ದಾರೆ'' ಎಂದು ಅಧೀರ್ ರಂಜನ್ ಚೌಧರಿ 'ಈಟಿವಿ ಭಾರತ'ಗೆ ತಿಳಿಸಿದರು.
''ಸ್ಪೀಕರ್ ಸದನದ ಪಾಲಕರಾಗಿರುವುದರಿಂದ ಅವರ ನಿರ್ಧಾರದ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ, ಸುಪ್ರೀಂ ಕೋರ್ಟ್‌ಗೆ ಹೋಗುವ ಕಾನೂನು ಆಯ್ಕೆಯು ನಮ್ಮ ಮುಂದೆ ಮುಕ್ತವಾಗಿದೆ'' ಎಂದು ಅವರು ಹೇಳಿದರು. ಇದೇ ವೇಳೆ, ಈ ಅಮಾನತು ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಆಶ್ರಯಿಸಲು ಸೂಕ್ತವಾದ ಪ್ರಕರಣ ಎಂಬ ಸಂಸದ ಮನೀಶ್ ತಿವಾರಿ ಹೇಳಿಕೆಗೆ ಚೌಧರಿ ಪ್ರತಿಕ್ರಿಯಿಸಿ, ''ಇದೊಂದು ಹಿಮ್ಮುಖ ಹೆಜ್ಜೆ. ಇದು ಸಂಸದೀಯ ಪ್ರಜಾಪ್ರಭುತ್ವದ ಆತ್ಮಕ್ಕೆ ಧಕ್ಕೆ ತರಲಿದೆ'' ಎಂದೂ ಅಭಿಪ್ರಾಯಪಟ್ಟರು.
''ನನ್ನನ್ನು ಸಮಿತಿಯು ಕರೆದರೆ ನಾನು ಖಂಡಿತವಾಗಿಯೂ ಸಮಿತಿಯ ಮುಂದೆ ಹಾಜರಾಗುತ್ತೇನೆ. ನಾವು ಒಂದು ಪಕ್ಷವಾಗಿ ನಿಯಮಗಳನ್ನು ಪಾಲಿಸುತ್ತೇವೆ. ನಾನು ಕೂಡ ನಿಯಮಗಳನ್ನು ಪಾಲಿಸುತ್ತೇನೆ. ನಾನು ಸದನದಲ್ಲಿ ಮಾತನಾಡುವಾಗ ಕ್ಷಮೆ ಕೇಳಬೇಕು ಎಂದು ಯಾರೂ ಹೇಳಲಿಲ್ಲ. ನನ್ನ ಭಾಷಣವನ್ನು ಪೂರ್ಣಗೊಳಿಸಲು ನನಗೆ ಅವಕಾಶ ನೀಡಿದ್ದರೆ, ನಾನು ನನ್ನ ಟೀಕೆಗಳನ್ನು ವಿವರಿಸುತ್ತಿದ್ದೆ. ಸೇಡಿನ ಕಾರಣದಿಂದ ಸದನದಲ್ಲಿ ನನ್ನ ಹೇಳಿಕೆಯ ಬಗ್ಗೆ ಸಚಿವರು ನನ್ನಿಂದ ಕ್ಷಮೆಯಾಚಿಸಲು ಪ್ರಯತ್ನಿಸಿದರು. ನಾನೇಕೆ ಕ್ಷಮೆ ಕೇಳಬೇಕು'' ಎಂದು ಪ್ರಶ್ನಿಸಿದರು.
ಓದಿ: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಮಾನತು.. ಸಭೆ ಕರೆದ ಸೋನಿಯಾ ಗಾಂಧಿ