ಅಹಮದಾಬಾದ್ (ಗುಜರಾತ್): ಶತಮಾನಗಳಷ್ಟು ಹಳೆಯದಾದ ತೂಗು ಸೇತುವೆ ಭಾನುವಾರ ಸಂಜೆ ಕುಸಿದು ಬಿದ್ದ ಪರಿಣಾಮ ಮೊರ್ಬಿ ನಗರದಲ್ಲಿ ದುರಂತ ಸಂಭವಿಸಿದ್ದು, 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗುಜರಾತ್ ಪಂಚಾಯತ್ ರಾಜ್ ಸಚಿವ ಬ್ರಿಜೇಶ್ ಮಿರ್ಜಾ ಮಾಹಿತಿ ನೀಡಿದ್ದಾರೆ.
ಭಾನುವಾರ ಸಂಜೆ ಸಂಭವಿಸಿದ ದುರಂತದ ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸೇತುವೆ ಮೇಲೆ ನಿಂತಿದ್ದ ಹಲವರು ನದಿಗೆ ಬಿದ್ದಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದರು.
ಮೊರ್ಬಿಯಲ್ಲಿರುವ ಮಚ್ಚು ನದಿಯ ತೂಗು ಸೇತುವೆ ನವೀಕರಣದ ನಂತರ ಇತ್ತೀಚೆಗಷ್ಟೇ ಸಾರ್ವಜನಿಕರಿಗೆ ತೆರೆಯಲಾಗಿತ್ತು. ಭಾನುವಾರ ಸಂಜೆ ಸೇತುವೆ ಮೇಲೆ ಅನೇಕ ಜನ ನಿಂತಿದ್ದರು. ಈ ವೇಳೆ ಜನರ ಹೆಚ್ಚಿನ ಭಾರದಿಂದ ಸೇತುವ ಕುಸಿದಿದೆ. ಸೇತುವೆ ಕುಸಿತದಿಂದಾಗಿ ಹಲವರು ನದಿಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇತುವೆ ಕುಸಿತದ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹ ಇದ್ದರು. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನದಿಗೆ ಬಿದ್ದಿದ್ದರಿಂದ ಅನೇಕ ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ತುರ್ತು ರಕ್ಷಣಾ ತಂಡಗಳನ್ನು ಸಜ್ಜುಗೊಳಿಸುವಂತೆ ಮತ್ತು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ಪ್ರಧಾನಿ ಮೋದಿ ಹಾಗೂ ಗುಜರಾತ್ ಸಿಎಂ ಪಟೇಲ್ ಸೂಚನೆ ನೀಡಿದ್ದಾರೆ.