ಹೈದರಾಬಾದ್: ತೆಲಂಗಾಣದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಸಜ್ಜಾಗಿದೆ. ಆದರೆ ಇದೇ ಸಮಯದಲ್ಲಿ ಸಿಎಲ್‌ಪಿ ನಾಯಕ ಯಾರು ಎಂಬ ಕುತೂಹಲ ಮುಂದುವರೆದಿದೆ. ಇನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಕೇಳಿ ಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಇನ್ನೂ ಸ್ಪಷ್ಟ ಹೇಳಿಕೆ ನೀಡಿಲ್ಲ.
ಹೈದರಾಬಾದ್‌ನ ಹೋಟೆಲ್‌ನಲ್ಲಿ ಸಭೆ ನಡೆಸಿದ ಕಾಂಗ್ರೆಸ್‌ನ ಎಲ್ಲ ಶಾಸಕರು ಏಕ ವಾಕ್ಯದ ನಿರ್ಣಯ ಅಂಗೀಕರಿಸಿದ್ದು, ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷ ಮಲಿಕಾರ್ಜುನ್ ಖರ್ಗೆ ಅವರಿಗೆ ನೀಡಲಾಗಿದ್ದು, ಅವರೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದಕ್ಕೆ ಹಿರಿಯ ಮುಖಂಡ ಹಾಗೂ ಶಾಸಕ ಬ್ಯಾಹಟ್ಟಿ ವಿಕ್ರಮಾರ್ಕ, ಶಾಸಕಿ ಸೀತಕ್ಕ ಮತ್ತಿತರ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈಗ ಚೆಂಡು ಹೈಕಮಾಂಡ್ ಅಂಗಳದಲ್ಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಹೀಗಾಗಿ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಸ್ಪಷ್ಟತೆ ಇಲ್ಲ. ನೂತನ ಸಿಎಂ ಆಯ್ಕೆ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಸೋಮವಾರ ನಡೆಯಬೇಕಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಂದಕ್ಕೆ ಹೋಗಿದೆ.
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿಎಲ್‌ಪಿ ನಾಯಕರ ಆಯ್ಕೆ ಕುರಿತು ನಾಯಕತ್ವದೊಂದಿಗೆ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್‌ನಿಂದ ಘೋಷಣೆ ಬಂದ ನಂತರವೇ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದು, ಆ ಬಳಿಕವೇ ಸಿಎಂ ಪ್ರಮಾಣವಚನದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಮತ್ತೊಂದು ಕಡೆ, ಕಾಂಗ್ರೆಸ್ ಶಾಸಕರು ಹೈಕಮಾಂಡ್ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.
ಸೋಮವಾರದಂದು ಪ್ರಮಾಣ ವಚನ ಸ್ವೀಕಾರ ನಡೆಯಬಹುದು ಎಂದು ಭಾನುವಾರ ಘೋಷಣೆ ಮಾಡಿದ್ದರಿಂದ ರಾಜಭವನದಲ್ಲಿ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದವು. ಕಾರ್ಯಕ್ರಮಕ್ಕೆ ಬೇಕಾದ ಕುರ್ಚಿ, ಟೆಂಟ್ ಹಾಗೂ ಇತರ ಪರಿಕರಗಳನ್ನು ಸ್ಥಳಾಂತರ ಮಾಡಲಾಗಿತ್ತು. ಆರ್ ಅಂಡ್ ಬಿ, ಜಿಎಚ್ ಎಂಸಿ ಮತ್ತಿತರ ಇಲಾಖೆಗಳ ಅಧಿಕಾರಿಗಳು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದರು. ಆದರೆ, ತೆಲಂಗಾಣಕ್ಕೆ ನೂತನ ಸಿಎಂ ಆಯ್ಕೆಗೆ ಒಮ್ಮತ ಮೂಡದ ಕಾರಣ ಈ ಸಮಾರಂಭ ರದ್ದಾಯಿತು ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಇದನ್ನು ಓದಿ: ಮಿಜೋರಂ ಚುನಾವಣೆ: 27 ಸ್ಥಾನಗಳಲ್ಲಿ ಗೆದ್ದು ಬೀಗಿದ ಝಡ್ಪಿಎಂ, ಆಡಳಿತಾರೂಢ ಎಂಎನ್ಎಫ್ಗೆ ಸೋಲು