ಚೆನ್ನೈ: ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅಮಾನತುಗೊಂಡಿದ್ದ ಐಎಎಸ್ ಅಧಿಕಾರಿ ಶಿವಶಂಕರ್ರನ್ನು ಬಂಧಿಸಲಾಗಿದೆ.
1.30 ಕೋಟಿ ರೂಪಾಯಿ ಮೌಲ್ಯದ ಡಾಲರ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿಯನ್ನು ಬಂಧಿಸಲು ಕಸ್ಟಮ್ಸ್ ಇಲ್ಲಿನ ನ್ಯಾಯಾಲಯದ ಅನುಮತಿಯನ್ನು ಕೋರಿತ್ತು. ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಧಾನ ಆರೋಪಿ ಸ್ವಪ್ನಾ ಸುರೇಶ್, ಸರಿತ್ ಪಿ.ಎಸ್. ಕೂಡ ಡಾಲರ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದ್ದು, ಈಗಾಗಲೇ ಅವರನ್ನು ಕಸ್ಟಮ್ಸ್ ಬಂಧಿಸಿದೆ.
ಇದಕ್ಕೂ ಮೊದಲು, ಶಿವಶಂಕರ್ ಅವರನ್ನು ಬಂಧಿಸಲು ಅನುಮತಿ ಕೋರಿ ಕಸ್ಟಮ್ಸ್ (ಪ್ರಿವೆಂಟಿವ್) ಆಯುಕ್ತರು, ಎರ್ನಾಕುಲಂನ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಆರ್ಥಿಕ ಅಪರಾಧಗಳು) ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.
ಇನ್ನು ರಾಯಭಾರ ಕಚೇರಿಯ ಮಾಜಿ ಸಿಬ್ಬಂದಿ ಸುರೇಶ್ ಅವರೊಂದಿಗೆ ಶಿವಶಂಕರ್ ಸಂಪರ್ಕ ಹೊಂದಿದ್ದು ಬೆಳಕಿಗೆ ಬಂದ ತಕ್ಷಣ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ತಮ್ಮ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಿವಶಂಕರ್ ರನ್ನು ಅಮಾನತು ಮಾಡಿದ್ದರು.
ಡಾಲರ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ವಿಧಾನಸಭೆ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರ ಸಹಾಯಕ ಖಾಸಗಿ ಕಾರ್ಯದರ್ಶಿಯ ಹೇಳಿಕೆಯನ್ನೂ ಜನವರಿ 8 ರಂದು ಕಸ್ಟಮ್ಸ್ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.