ರಾಂಚಿ (ಜಾರ್ಖಂಡ್): ತಮ್ಮ 29 ವರ್ಷದ ಮನೆಗೆಲಸದ ಮಹಿಳೆಗೆ ಚಿತ್ರಹಿಂಸೆ ನೀಡಿ ಹಸಿವಿನಿಂದ ನರಳಿಸಿದ ಆರೋಪದ ಮೇಲೆ ಜಾರ್ಖಂಡ್‌ನ ಬಿಜೆಪಿ ಮಾಜಿ ನಾಯಕಿ ಮತ್ತು ಮಾಜಿ ಐಎಎಸ್ ಅಧಿಕಾರಿಯ ಪತ್ನಿಯೂ ಆಗಿರುವ ಸೀಮಾ ಪಾತ್ರಾ ಅವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ತಕ್ಷಣವೇ ಅವರನ್ನು ಕೋರ್ಟ್ಗೂ ಹಾಜರು ಪಡಿಸಲಾಗಿದ್ದು, ಸೆಪ್ಟೆಂಬರ್ 12ರವರೆಗೆ 14 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಸೀಮಾ ಪಾತ್ರಾ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಅಮಾನುಷವಾಗಿ ಚಿತ್ರಹಿಂಸೆ ನೀಡಿದ ಪ್ರಕರಣ ಸೋಮವಾರ ಬೆಳಕಿಗೆ ಬಂದಿತ್ತು. 'ನನ್ನನ್ನು ಮನೆಯಲ್ಲಿ ಕೂಡಿ ಹಾಕಿ ದಿನಗಟ್ಟಲೆ ಅನ್ನ ಕೊಡದೇ ಹಸಿವಿನಿಂದ ನರಳಿಸಿದ್ದಾರೆ. ಅಲ್ಲದೇ, ನನ್ನ ಮೇಲೆ ಹಲ್ಲೆ ಮಾಡಿಸಿರುವ ಪತ್ರಾ, ನೆಲದ ಮೇಲೆ ತಮ್ಮ ಮೂತ್ರವನ್ನು ನೆಕ್ಕಿಸಿದ್ದಾರೆ' ಎಂದು ಸಂತ್ರಸ್ತೆ ಹೇಳಿಕೊಂಡಿದ್ದರು. ಆದರೆ, ಇದನ್ನು ನಿರಾಕರಿಸಿರುವ ಸೀಮಾ ಪಾತ್ರಾ, ತಾನು ನಿರಪರಾಧಿ ಹಾಗೂ ಇದು ಸುಳ್ಳು ಮತ್ತು ರಾಜಕೀಯ ಪ್ರೇರಿತ ಆರೋಪ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಬಿಜೆಪಿ ಜಾರ್ಖಂಡ್ ಘಟಕವು ಪಾತ್ರಾ ಅವರಿಂದ ಅಂತರ ಕಾಯ್ದುಕೊಂಡಿದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಮೇಲಿನ ದೌರ್ಜನ್ಯವನ್ನು ಪಕ್ಷ ಸಹಿಸುವುದಿಲ್ಲ ಮತ್ತು ಶೂನ್ಯ ಸಹಿಷ್ಣುತೆ ಹೊಂದಿದೆ. ಕೆಲಸದಾಕೆಗೆ ಅಮಾನುಷವಾಗಿ ಹಿಂಸೆ ನಡೆಸಿದ ಘಟನೆ ಬೆಳಕಿಗೆ ಬಂದ ತಕ್ಷಣವೇ ಬಿಜೆಪಿ ರಾಜ್ಯಾಧ್ಯಕ್ಷರು ತಕ್ಷಣವೇ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದಾರೆ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.
ಅಲ್ಲದೇ, ಈ ಘಟನೆಯ ಬಗ್ಗೆ ತನಿಖೆ ನಡೆಸಲು ಪಕ್ಷದಿಂದ ಸಮಿತಿಯನ್ನೂ ಸಹ ರಚಿಸಲಾಗಿದೆ. ಜೊತೆಗೆ ಪಕ್ಷದಿಂದ ಪ್ರಾಥಮಿಕ ಸದಸ್ಯತ್ವವನ್ನು ವಜಾಗೊಳಿಸುವ ಬಗ್ಗೆ ಶೋಕಾಸ್ ಜಾರಿ ಮಾಡಲಾಗಿದೆ. ಸಮಿತಿಯು ವರದಿ ಸಲ್ಲಿಸಿದ ನಂತರ ಸೀಮಾ ಪಾತ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿಯಲ್ಲಿ ಅಂತಹವರಿಗೆ ಸ್ಥಾನವಿಲ್ಲ ಎಂದೂ ಬಿಜೆಪಿ ಹೇಳಿದೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಸೀಮಾ ಪಾತ್ರಾ ವಿರುದ್ಧ ತನಿಖೆಗೆ ಆದೇಶಿಸಿದೆ. ಆಯೋಗಕ್ಕೆ ಸಲ್ಲಿಕೆಯಾದ ದೂರಿನಲ್ಲಿ ಮನೆಗೆಲಸದಾಕೆಯ ಹಲ್ಲುಗಳನ್ನು ಕಬ್ಬಿಣದ ರಾಡ್‌ನಿಂದ ಮುರಿಯಲಾಗಿದೆ. ಈ ದೌರ್ಜನ್ಯವು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಬಗ್ಗೆ ಸೂಕ್ತವಾದ ತನಿಖೆ ಕೈಗೊಂಡು, ಈ ಪ್ರಕರಣದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಏಳು ದಿನಗಳೊಳಗೆ ಆಯೋಗಕ್ಕೆ ತಿಳಿಸಬೇಕೆಂದು ಜಾರ್ಖಂಡ್‌ನ ಪೊಲೀಸ್ ಮಹಾನಿರ್ದೇಶಕರಿಗೆ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿಯೆಂದು 6 ವರ್ಷದ ಮಗಳನ್ನೇ ಕೊಂದ ತಾಯಿ