ಸೂರತ್(ಗುಜರಾತ್): ಬೇಕರಿ ಹಾಗೂ ಸ್ವೀಟ್ ಅಂಗಡಿಗಳಲ್ಲಿ ಲಭ್ಯವಾಗುವ ಸಿಹಿ ಪದಾರ್ಥಗಳು ಪ್ರತಿ ಕೆಜಿಗೆ ಅಬ್ಬಬ್ಬಾ ಅಂದರೆ 500ರಿಂದ 1000 ರೂಪಾಯಿವರೆಗೆ ಇರುತ್ತದೆ. ಆದರೆ ಗುಜರಾತ್ನ ಸೂರತ್ನಲ್ಲಿ ಸಿಗುವ ಈ ಸ್ವೀಟ್ ಬೆಲೆ ಕೇಳಿದ್ರೆ ತಲೆ ತಿರುಗುವುದು ಗ್ಯಾರಂಟಿ. ಇಷ್ಟಕ್ಕೂ ಅದರಲ್ಲಿ ಏನಿದೆ ಎಂಬ ಪ್ರಶ್ನೆ ಸಹ ಉದ್ಭವವಾಗುತ್ತದೆ.
ಗುಜರಾತ್ನ ಸೂರತ್ನಲ್ಲಿ ನಾಳೆ ಚಾಂದನಿ ಪಡ್ವಾ ಆಚರಣೆ ಮಾಡಲಾಗ್ತಿದ್ದು, ಹೀಗಾಗಿ ಹೆಚ್ಚಿನ ಸ್ವೀಟ್ ತಯಾರು ಮಾಡಲಾಗುತ್ತದೆ. ಪ್ರತಿ ವರ್ಷ ಶರದ್ ಪೂರ್ಣಿಮೆಯ ಮಾರನೇ ದಿನ ಈ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಈ ಹಬ್ಬದಲ್ಲಿ ವಿವಿಧ ಸಿಹಿ ತಿಂಡಿ ತಯಾರು ಮಾಡಲಾಗ್ತದೆ.
ಚಾಂದನಿ ಪಡ್ವಾ ಹಬ್ಬದ ಪ್ರಯುಕ್ತ ಸೂರತ್ನ ಸ್ವೀಟ್ ಅಂಗಡಿವೊಂದರಲ್ಲಿ 'ಗೋಲ್ಡ್ ಘರಿ' ಎಂಬ ವಿಶೇಷ ಸಿಹಿ ತಿನಿಸು ತಯಾರು ಆಗಿದ್ದು, ಇದರ ಬೆಲೆ ಪ್ರತಿ ಕೆಜಿಗೆ 9 ಸಾವಿರ ರೂಪಾಯಿ. ಬರೋಬ್ಬರಿ 140 ಟನ್ಗಳಷ್ಟು ಶುದ್ಧ ತುಪ್ಪದಿಂದ ಈ ಸಿಹಿ ತಿನಿಸು ಸಜ್ಜುಗೊಂಡಿದ್ದು, 10 ಸಾವಿರ ಕಿಲೋದಷ್ಟು ಸಿಹಿ ಗಲ್ಫ್ ರಾಷ್ಟ್ರಗಳು, ಅಮೆರಿಕ ಮತ್ತು ಯುರೋಪ್ಗಳಿಗೆ ರಫ್ತು ಮಾಡಲಾಗುತ್ತದೆ.
ಮಾಮೂಲಿಯಾಗಿ ಈ ಘರಿ ಸಿಹಿ ತಿನಿಸು ಪ್ರತಿ ಕೆಜಿಗೆ 600 ದಿಂದ ಸಾವಿರ ರೂಪಾಯಿಯೊಳಗೆ ಇರುತ್ತದೆ. ಆದರೆ, ಸೂರತ್ನ ಸ್ವೀಟ್ ಅಂಗಡಿಯಲ್ಲಿ ತಯಾರುಗೊಂಡಿರುವ ಘರಿ ಮಾತ್ರ 9 ಸಾವಿರ ರೂಪಾಯಿಗೆ ಕೆಜಿ ಮಾರಾಟವಾಗುತ್ತದೆ.
ವಿಶೇಷ ಏನು?
ಈ ಸ್ವೀಟ್ಗೆ ಸಂಪೂರ್ಣವಾಗಿ 24 ಕ್ಯಾರೆಟ್ ಚಿನ್ನದ ಲೇಪನವಿರುವ ಕಾರಣ ಇಷ್ಟೊಂದು ದುಬಾರಿಯಾಗಿ ಮಾರಾಟ ಮಾಡಲಾಗ್ತಿದೆಯಂತೆ. ವಿಭಿನ್ನ ಡ್ರೈ ಫ್ರೂಟ್ಸ್ಗಳಿಂದ ಈ ಸಿಹಿ ತಿನಿಸು ಸಜ್ಜಾಗಿದ್ದು, ಖರೀದಿ ಮಾಡಲು ಜನರು ಸಾಲು ಸಾಲಾಗಿ ನಿಂತುಕೊಂಡಿರುತ್ತಾರೆ.