ಸೂರತ್(ಗುಜರಾತ್): ಮಾನಹಾನಿ ಪ್ರಕರಣದಲ್ಲಿ ತಮಗೆ ನೀಡಲಾದ 2 ವರ್ಷ ಜೈಲು ಶಿಕ್ಷೆಗೆ ತಡೆ ನೀಡಬೇಕು ಎಂದು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸೂರತ್ ಸೆಷನ್ಸ್ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ. ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸುವ ಮುನ್ನ ನ್ಯಾಯಾಧೀಶ ರಾಬಿನ್ ಮೊಗೇರ ಅವರು ರಾಹುಲ್ ಗಾಂಧಿ ಮತ್ತು ದೂರುದಾರ ಬಿಜೆಪಿಯ ಪೂರ್ಣೇಶ್ ಮೋದಿ ಅವರ ವಾದವನ್ನು ಆಲಿಸಿದರು. ಆ ಬಳಿಕ ತೀರ್ಪನ್ನು ಕಾಯ್ದಿರಿಸಿದ್ದು, ಏಪ್ರಿಲ್ 20 ರಂದು ಆದೇಶ ಪ್ರಕಟವಾಗಲಿದೆ.
ಮಾನಹಾನಿ ಪ್ರಕರಣದಲ್ಲಿ ತಮಗೆ ನೀಡಲಾದ 2 ವರ್ಷ ಜೈಲು ಶಿಕ್ಷೆಗೆ ತಡೆ ನೀಡಬೇಕು ಎಂದು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ಬೆಳಗ್ಗೆ ಆರಂಭವಾಗಿತ್ತು. ಸೂರತ್ ಸೆಷನ್ಸ್ ಕೋರ್ಟ್ ಈ ಅರ್ಜಿಯ ವಿಚಾರಣೆ ನಡೆಸಿತು. ಇದೇ ವೇಳೆ ರಾಹುಲ್ ಅರ್ಜಿಯ ವಿರುದ್ಧ ಶಾಸಕ ಪೂರ್ಣೇಶ್ ಮೋದಿ ಸಲ್ಲಿಸಿದ ಆಕ್ಷೇಪಣಾ ಅರ್ಜಿಯನ್ನೂ ವಿಚಾರಣೆ ನಡೆಸಲಾಯಿತು.
"ಮೋದಿ ಉಪನಾಮ" ಹೇಳಿಕೆಗೆ ಸಂಬಂಧಿಸಿದಂತೆ ಪೂರ್ಣೇಶ್ ಮೋದಿ ಸಲ್ಲಿಸಿದ ಕ್ರಿಮಿನಲ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಪರಿಗಣಿಸಿದ್ದ ಸೂರತ್ ಕೋರ್ಟ್ ಅವರಿಗೆ ಮಾರ್ಚ್ 23 ರಂದು 2 ವರ್ಷ ಶಿಕ್ಷೆ, ದಂಡ ವಿಧಿಸಿತ್ತು. ಕ್ರಿಮಿನಲ್ ಕೇಸ್ನಲ್ಲಿ ಶಿಕ್ಷೆಗೆ ಒಳಗಾಗಿದ್ದರಿಂದ ರಾಹುಲ್ ಅವರ ಸಂಸದ ಸ್ಥಾನದಿಂದ ಅನರ್ಹರಾಗಿದ್ದರು. ಈ ಬಗ್ಗೆ ಸಂಸತ್ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು.
ಪೂರ್ಣೇಶ್ ಮೋದಿ ಆಕ್ಷೇಪಣಾ ಅರ್ಜಿ: ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು, ರಾಹುಲ್ ಅವರ ಶಿಕ್ಷೆ ತಡೆ ಅರ್ಜಿಯ ವಿರುದ್ಧ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಶಿಕ್ಷೆಗೆ ಒಳಗಾದ ಬಳಿಕವೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡಾಫೆ ಹೇಳಿಕೆ ನೀಡುತ್ತಲೇ ಇದ್ದಾರೆ. ಮಾನಹಾನಿ ಮಾತುಗಳನ್ನು ಅವರು ಮುಂದುವರಿಸಿದ್ದಾರೆ. ನ್ಯಾಯಾಲಯದ ಹೇಳಿಕೆಯನ್ನು ಪ್ರಸ್ತಾಪಿಸಿ ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಅವರು ಕುಚೋದ್ಯ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಈಗ ನೀಡಿರುವ ಶಿಕ್ಷೆಗೆ ಯಾವ ಕಾರಣಕ್ಕೂ ತಡೆ ನೀಡಬಾರದು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
"ರಾಹುಲ್ ಗಾಂಧಿ ಅವರ ಶಿಕ್ಷಗೆ ತಡೆಯಾಜ್ಞೆ ಕೋರಿ ಅವರ ವಕೀಲರು ಮಂಡಿಸಿದ ವಾದವನ್ನು ನ್ಯಾಯಾಲಯವು ಮೊದಲು ಆಲಿಸುತ್ತದೆ. ಅದರ ನಂತರ, ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ ಮನವಿಯ ವಿರುದ್ಧದ ಆಕ್ಷೇಪಣಾ ಅರ್ಜಿಯ ವಿಚಾರಣೆ ನಡೆಯುತ್ತದೆ ಎಂದು ಪೂರ್ಣೇಶ್ ಮೋದಿ ಅವರ ಪರ ವಕೀಲ ಕೇತನ್ ರೇಶಮ್ವಾಲಾ ನ್ಯಾಯಾಲಯ ಪ್ರವೇಶಿಸುವ ಮೊದಲು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ರಾಹುಲ್ಗೆ ಪಾಟ್ನಾ ಕೋರ್ಟಿಂದ ಸಮನ್ಸ್: ಇನ್ನೊಂದೆಡೆ ಮೋದಿ ಉಪನಾಮ ಬಳಕೆ ಸಂಬಂಧ ರಾಹುಲ್ ಗಾಂಧಿ ಅವರಿಗೆ ಬಿಹಾರದ ಪಾಟ್ನಾ ಕೋರ್ಟ್ ಕೂಡ ಸಮನ್ಸ್ ಜಾರಿ ಮಾಡಿದೆ. ಬಿಜೆಪಿ ಸಂಸದ, ಮಾಜಿ ಉಪಮುಖ್ಯಮಂತ್ರಿ ಸುಶೀಲ್ಕುಮಾರ್ ಶಿಂಧೆ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದು, ಅದರ ವಿಚಾರಣೆಯಿಂದ ರಾಹುಲ್ ತಪ್ಪಿಸಿಕೊಂಡಿದ್ದರು. ಇದರಿಂದ ಕೋರ್ಟ್ ಸಮನ್ಸ್ ನೀಡಿದೆ.
ತಮಗೆ ನೀಡಲಾದ ಶಿಕ್ಷೆಗೆ ತಡೆ ನೀಡಬೇಕು ಎಂದು ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸೂರತ್ ಕೋರ್ಟ್ನ ವಿಚಾರಣೆಯಲ್ಲಿ ತೊಡಗಿಸಿಕೊಂಡಿರುವ ಕಾರಣ ಖುದ್ದು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಚಾರಣೆಗೆ ಇನ್ನೊಂದು ದಿನಾಂಕ ನೀಡಬೇಕು ಎಂದು ರಾಹುಲ್ ಮನವಿ ಮಾಡಿದ್ದರು. ಅದರಂತೆ ಪಾಟ್ನಾ ಕೋರ್ಟ್, ಏ.25 ರಂದು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸಮನ್ಸ್ನಲ್ಲಿ ಸೂಚಿಸಿದೆ.
ಓದಿ: ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಅಸ್ಸಾಂ ಸಿಎಂ