ಸೂರತ್(ಗುಜರಾತ್): ಸುಮಾರು 20 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ದೃಢವಾಗಿದೆ. ಹೀಗಾಗಿ, ಸೂರತ್ ನಗರದ ಎರಡು ಪ್ರಾಥಮಿಕ ಶಾಲೆಗಳು ಮತ್ತು ಕಾಲೇಜನ್ನು 2 ವಾರಗಳ ಕಾಲ ಮುಚ್ಚಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆಶಿಶ್ ನಾಯಕ್ ತಿಳಿಸಿದ್ದಾರೆ.
ಕಳೆದ ವರ್ಷ ಕೋವಿಡ್-19 ಉಲ್ಬಣಗೊಂಡ ಪರಿಣಾಮ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ಸರ್ಕಾರದ ಆದೇಶದ ಮೇರೆಗೆ 2021ರ ಫೆಬ್ರವರಿಯಲ್ಲಿ ಪುನಃ ತೆರೆಯಲಾಗಿತ್ತು. ಅಂದಿನಿಂದ ಈವರೆಗೆ ಸುಮಾರು 118 ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಕೊರೊನಾ ಪತ್ತೆಯಾಗಿದೆ ಎಂದರು.
ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಎಂಸಿ) ಸಿ ಡಿ ಬಾರ್ಫಿವಾಲಾ ಕಾಲೇಜಿನ ಸುಮಾರು 10 ವಿದ್ಯಾರ್ಥಿಗಳಲ್ಲಿ ಕೊರೊನಾ ದೃಢವಾದ ನಂತರ ಕಾಲೇಜನ್ನು 14 ದಿನಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಅವರು, ಪ್ರಾಥಮಿಕ ಶಾಲೆಯ ಆರು ವಿದ್ಯಾರ್ಥಿಗಳು ಮತ್ತು ಇನ್ನೊಂದು ಶಾಲೆಯ ನಾಲ್ಕು ವಿದ್ಯಾರ್ಥಿಗಳಿಗೆ ಸೋಂಕು ದೃಢವಾಗಿರುವುದರಿಂದ ಎರಡೂ ಶಿಕ್ಷಣ ಸಂಸ್ಥೆಗಳನ್ನು ಸಹ 14 ದಿನಗಳವರೆಗೆ ಬಂದ್ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.
ಒಂದು ಸಂಸ್ಥೆಯಲ್ಲಿ ಕನಿಷ್ಠ ಐದು ಪ್ರಕರಣಗಳಿಗಿಂತ ಹೆಚ್ಚು ಕೊರೊನಾ ವರದಿ ಕಂಡು ಬಂದರೆ ಅದನ್ನು ಮುಚ್ಚಲು ನಾವು ಈಗಾಗಲೇ ನಿರ್ಧರಿಸಿದ್ದೇವೆ. ಹಾಗೆಯೇ, ಶಿಕ್ಷಣ ಸಂಸ್ಥೆಗಳಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ ಅಲ್ಲಿನ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಓದಿ: ಬಂಗಾಳದಲ್ಲಿ ಅರ್ಥಶಾಸ್ತ್ರಜ್ಞ, ತಮಿಳುನಾಡಿಗೆ 'ಸಿಂಗಂ', ಕೇರಳಕ್ಕೆ 'ಮೆಟ್ರೋಮ್ಯಾನ್': ವಿಧಾನ ಕದನಕ್ಕೆ ಬಿಜೆಪಿ ರೆಡಿ
ಶಿಕ್ಷಣ ಸಂಸ್ಥೆಗಳಲ್ಲಿ ಇತ್ತೀಚೆಗೆ ಕಂಡು ಬಂದ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳ ಪರಿಗಣಿಸಿ ಆನ್‌ಲೈನ್ ತರಗತಿಗಳನ್ನು ನಡೆಸಲು ಮತ್ತು ತಮ್ಮ ಕ್ಯಾಂಪಸ್‌ಗಳನ್ನು ಸಾಧ್ಯವಾದಷ್ಟು ದಿನ ಬಂದ್ ಮಾಡಲು ಎಸ್‌ಎಂಸಿ ಶಾಲೆಗಳು ಮತ್ತು ಕಾಲೇಜುಗಳ ಆಡಳಿತ ಮಂಡಳಿ ಕೋರಿದೆ ಎಂದು ತಿಳಿಸಿದ ಅವರು, ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಈವರೆಗೆ 40,503 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದರು.