ನವದೆಹಲಿ: ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಲಿದೆ. ಜುಲೈ 4 ರಂದು ವಕೀಲ ಕುಮುದ್ ಲತಾ ಅವರು ಹರ್ಷ್ ಅಜಯ್ ಸಿಂಗ್ ಪರವಾಗಿ ಸಲ್ಲಿಸಿದ ಅರ್ಜಿಯನ್ನು ಪ್ರಸ್ತಾಪಿಸಿ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಮತ್ತೊಬ್ಬ ಅರ್ಜಿದಾರ ಎಂ.ಎಲ್.ಶರ್ಮಾ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಿದ್ದರು.
ಅಗ್ನಿವೀರರ ಮೊದಲ ಬ್ಯಾಚ್ ನೋಂದಣಿಗೆ ಮುಂಚಿತವಾಗಿ ಜೂನ್ 22 ರಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿತ್ತು. ಮತ್ತು ರಕ್ಷಣಾ ನೇಮಕಾತಿ ಯೋಜನೆಯನ್ನು ಪ್ರಶ್ನಿಸುವ ಅರ್ಜಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಮೊದಲು ಈ ಅರ್ಜಿ ವಿಚಾರಣೆ ನಡೆಸುವಂತೆ ಪೀಠವನ್ನು ಒತ್ತಾಯಿಸಿತ್ತು.
ಜೂನ್ 14 ರಂದು ಕೇಂದ್ರವು 17.5 ರಿಂದ 21 ವರ್ಷದೊಳಗಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಿಗೆ ನೇಮಿಸಿಕೊಳ್ಳುವ ಅಗ್ನಿಪಥ್ ಯೋಜನೆ ಘೋಷಿಸಿದೆ. ಅವಧಿ ಪೂರ್ಣಗೊಂಡ ನಂತರ, 'ಅಗ್ನಿವೀರರು' ಸಾಮಾನ್ಯ ಕೇಡರ್‌ಗೆ ಸ್ವಯಂಪ್ರೇರಣೆಯಿಂದ ಅರ್ಜಿ ಸಲ್ಲಿಸಲು ಅವಕಾಶ ಪಡೆಯುತ್ತಾರೆ. ಅರ್ಹತೆ ಮತ್ತು ಸಾಂಸ್ಥಿಕ ಅಗತ್ಯತೆಯ ಆಧಾರದ ಮೇಲೆ ಇನ್ನೊಂದು ಸುತ್ತಿನ ಸ್ಕ್ರೀನಿಂಗ್‌ನ ನಂತರ ಆ ಬ್ಯಾಚ್‌ನಿಂದ 25 ಪ್ರತಿಶತದಷ್ಟು ಅಗ್ನಿವೀರರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿತ್ತು.
ಈ ಯೋಜನೆ ಘೋಷಣೆಯಾದ ನಂತರ ದೇಶದ ಹಲವು ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಬಳಿಕ ವಯಸ್ಸಿನ ಮಿತಿಯನ್ನು 23ಕ್ಕೆ ಹೆಚ್ಚಿಸಿದ್ದಲ್ಲದೆ, ಇತರೆ ರಿಯಾಯಿತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿತು. ಹಲವಾರು ಸಚಿವಾಲಯಗಳು ಮತ್ತು ಬಿಜೆಪಿ ಆಡಳಿತದ ರಾಜ್ಯಗಳು ಅಗ್ನಿವೀರರಿಗೆ ಉದ್ಯೋಗಾವಕಾಶಗಳನ್ನು ನೀಡಿವೆ.
ಇದನ್ನೂ ಓದಿ: ಸಂಸತ್ ಅಧಿವೇಶನ: ಅಗ್ನಿಪಥ್ ಹಿಂಪಡೆಯುವಂತೆ ಆಗ್ರಹಿಸಲು ಕಾಂಗ್ರೆಸ್ ಸಿದ್ಧತೆ