ನವದೆಹಲಿ: ಕಳೆದ ವರ್ಷ ಉಂಟಾದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಾಳೆ ಸುಪ್ರೀಂಕೋರ್ಟ್ನಲ್ಲಿ ಮಹತ್ವದ ತೀರ್ಪು ಹೊರ ಬೀಳಲಿದೆ. ಕೇಂದ್ರ ಚುನಾವಣಾ ಆಯೋಗವು ಶಿವಸೇನೆಯ ಬಿಲ್ಲು ಮತ್ತು ಬಾಣದ ಪಕ್ಷದ ಚಿಹ್ನೆ ಮತ್ತು ಪಕ್ಷದ ಹೆಸರಿಗೆ ಸರ್ವೋಚ್ಛ ನ್ಯಾಯಾಲಯ ತನ್ನ ಆದೇಶ ನೀಡಲಿದೆ. ಇದರಿಂದ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣದಲ್ಲಿ ಯಾವುದು ನಿಜವಾದ ಶಿವಸೇನೆ ಎಂಬುವುದು ಇತ್ಯರ್ಥವಾಗಲಿದೆ.
ಕಳೆದ ವರ್ಷ ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಂಡಾಯದ ಬಾವುಟ ಹಾರಿಸಿದ್ದರಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿ ಎದ್ದಿತ್ತು. ಶಿವಸೇನೆ, ಕಾಂಗ್ರೆಸ್, ಎನ್ಸಿಪಿ ಮೈತ್ರಿಕೂಟದ ಮಹಾ ವಿಕಾಸ ಆಘಾಡಿ ಸರ್ಕಾರದ ವಿರುದ್ಧ ಶಿಂಧೆ ನೇತೃತ್ವದಲ್ಲಿ ಸುಮಾರು 50 ಶಾಸಕರು ಹೊಸ ಬಣ ಕಟ್ಟಿಕೊಂಡಿದ್ದರು. ಇದರಿಂದ 2022ರ ಜೂನ್ 29ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದರು. ಮತ್ತೊಂದೆಡೆ, ಏಕನಾಥ್ ಶಿಂಧೆ ಬಿಜೆಪಿ ಜೊತೆಗೂಡಿ ಹೊಸ ಸರ್ಕಾರ ರಚನೆ ಮಾಡಿದ್ದರು. ಈ ಮೂಲಕ ಶಿವಸೇನೆ ಪಕ್ಷ ಇಬ್ಭಾಗಗೊಂಡಿತ್ತು.
ಇದನ್ನೂ ಓದಿ: ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ: ಉದ್ಧವ್ ಕೈ ಜಾರಿದ ಬಿಲ್ಲು-ಬಾಣ
ನಂತರದಲ್ಲಿ ಉದ್ಧವ್ ಹಾಗೂ ಶಿಂಧೆ ನಡುವೆ ಮೂಲ ಶಿವಸೇನೆ ಯಾವುದು ಎಂಬ ಕಿತ್ತಾಟ ಶುರುವಾಗಿತ್ತು. ಇದರ ನಡುವೆ ನವೆಂಬರ್ನಲ್ಲಿ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಶಿವಸೇನೆಯ ಮೂಲ ಚಿಹ್ನೆಯಾದ ಬಿಲ್ಲು ಮತ್ತು ಬಾಣದ ಗುರುತನ್ನು ಯಾವುದೇ ಬಣ ಬಳಸದಂತೆ ಸೂಚಿಸಲಾಗಿತ್ತು. ಎರಡು ಬಣಗಳಿಗೂ ಪ್ರತ್ಯೇಕವಾದ ಚಿಹ್ನೆಯನ್ನು ಹಂಚಿಕೆ ಮಾಡಲಾಗಿತ್ತು. ಆಗ ಶಿಂಧೆ ಬಣವು ಎರಡು ಕತ್ತಿ ಮತ್ತು ಗುರಾಣಿ ಚಿಹ್ನೆ ಪಡೆದಿದ್ದರೆ, ಉದ್ಧವ್ ಠಾಕ್ರೆ ಬಣವು ಪ್ರಜ್ವಲಿಸುವ ಜ್ಯೋತಿಯ ಚಿಹ್ನೆಯನ್ನು ಹೊಂದಿತ್ತು.
ಮತ್ತೊಂದೆಡೆ, ಈ ವಿಷಯವು ಚುನಾವಣಾ ಆಯೋಗದ ಮೆಟ್ಟಿಲೇರಿತ್ತು. ಆಗ ಫೆಬ್ರವರಿ 17ರಂದು ಚುನಾವಣಾ ಆಯೋಗ ತನ್ನ ತೀರ್ಪು ನೀಡಿ, ಏಕನಾಥ್ ಶಿಂಧೆ ಬಣಕ್ಕೆ ಮೂಲ ಚಿಹ್ನೆ ಎಂದರೆ, ಬಿಲ್ಲು ಮತ್ತು ಬಾಣದ ಗುರುತನ್ನು ಹಂಚಿಕೆ ಮಾಡಿತ್ತು. ಇತ್ತ, ಉದ್ಧವ್ ಠಾಕ್ರೆ ಬಣಕ್ಕೆ ಪ್ರಜ್ವಲಿಸುವ ಜ್ಯೋತಿಯ ಚಿಹ್ನೆಯನ್ನು ಮುಂಬರುವ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳು ಮುಗಿಯುವವರೆಗೆ ಇರಿಸಿಕೊಳ್ಳಲು ಅನುಮತಿಸಿತ್ತು.
ಚುನಾವಣಾ ಆಯೋಗದ ಈ ಆದೇಶವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣವು ಶಿವಸೇನೆ ಚಿಹ್ನೆ ಹಂಚಿಕೆ ವಿಷಯವು ಸುಪ್ರೀಂಕೋರ್ಟ್ನಲ್ಲಿ ಇನ್ನೂ ಬಾಕಿಯಿರುವಾಗಲೇ ಆಯೋಗ ಚಿಹ್ನೆ ಮತ್ತು ಪಕ್ಷದ ಹೆಸರು ಹಂಚಿಕೆ ಹಂಚಿಕೆ ಮಾಡಿದೆ ಎಂದು ತಕರಾರು ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಂವಿಧಾನಿಕ ಪೀಠವು ಮೇ 11ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದೆ.
ಇದನ್ನೂ ಓದಿ: ಶಿಂದೆ ಬಣಕ್ಕೆ ಶಿವಸೇನಾ ಹೆಸರು, ಚಿಹ್ನೆ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಠಾಕ್ರೆ ಬಣ