ನವದೆಹಲಿ: ವಿವಾದಾತ್ಮಕ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನುಪೂರ್ ಶರ್ಮಾ ಅವರನ್ನು ಸುಪ್ರೀಂಕೋರ್ಟ್ ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನಿಮ್ಮ ಹೇಳಿಕೆ ರಾಷ್ಟ್ರದ ಭದ್ರತೆಗೆ ಧಕ್ಕೆ ತಂದಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನಿಮ್ಮ ಸಡಿಲವಾದ ನಾಲಿಗೆಯಿಂದ ಇಡೀ ದೇಶ ತಲೆತಗ್ಗಿಸುವಂತೆ ಆಗಿದೆ. ಈಗ ದೇಶದಲ್ಲಾಗುತ್ತಿರುವ ಪ್ರತಿಭಟನೆಗೆ ಕಾರಣವಾಗಿರುವ ನುಪೂರ್ ಶರ್ಮಾ ಇಡೀ ದೇಶಕ್ಕೆ ಕ್ಷಮೆ ಯಾಚಿಸಬೇಕು ಎಂದೂ ಹೇಳಿದೆ. ತಮ್ಮ ವಿವಾದಾತ್ಮಕ ಹೇಳಿಕೆಯ ಮೇಲೆ ಹಲವಾರು ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ತನಿಖೆಗಾಗಿ ದೆಹಲಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಶರ್ಮಾ ಅರ್ಜಿ ಸಲ್ಲಿಸಿದ್ದರು.
ನೀವು ವಕೀಲರಾಗಿದ್ದುಕೊಂಡು ಹೀಗೆ ಮಾಡಬಹುದೇ?: ಈ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಆಕ್ರೋಶ ವ್ಯಕ್ತಪಡಿಸಿದೆ. ಅದಲ್ಲದೆ ನುಪೂರ್ ಶರ್ಮಾ ಅವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನೀವು ಪಕ್ಷವೊಂದರ ವಕ್ತಾರರು, ತನಗೆ ಅಧಿಕಾರವಿದೆ ಎಂದ ಮಾತ್ರಕೆ ದೇಶದ ಕಾನೂನನ್ನು ಗೌರವಿಸದೆ ಯಾವುದೇ ಹೇಳಿಕೆ ನೀಡಬಹುದು ಎಂದುಕೊಂಡಿದ್ದೀರಾ? ಅದಲ್ಲದೆ ಒಬ್ಬ ವಕೀಲೆಯಾಗಿದ್ದುಕೊಂಡು ಹೀಗೆ ಮಾತನಾಡಿರುವುದು ನಾಚಿಕೆಗೇಡು ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ನೀವು ಏನು ಬೇಕಾದರೂ ಹೇಳಲು ಸಾಧ್ಯವಿಲ್ಲ. ಈ ಜನರಿಗೆ ಯಾವುದೇ ಧರ್ಮದ ಬಗ್ಗೆ ಗೌರವವಿಲ್ಲ, ನೀವು ನಿಮ್ಮ ಧರ್ಮವನ್ನು ಗೌರವಿಸಿದರೆ ಮಾತ್ರ ಆಗ ಎಲ್ಲ ಧರ್ಮಗಳನ್ನು ಗೌರವಿಸಲು ಸಾಧ್ಯ ಎಂದು ಶರ್ಮಾ ಅವರ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ಶರ್ಮಾ ಪರ ವಕೀಲರು ಹೇಳಿದ್ದೇನು? ನುಪೂರ್ ಶರ್ಮಾ ಅವರು ಟಿವಿ ಚರ್ಚೆಯ ವೇಳೆ ಆ್ಯಂಕರ್ ಕೇಳಿದ ಪ್ರಶ್ನೆಗಷ್ಟೇ ಉತ್ತರಿಸಿದ್ದಾರೆ. ಇದರ ವಿರುದ್ಧ ನಾಗರಿಕರಿಗೆ ಪ್ರಶ್ನೆ ಮಾಡುವ ಹಕ್ಕಿಲ್ಲ ಎಂದು ಶರ್ಮಾ ಪರ ವಕೀಲರು ವಾದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದಾದರೆ ಮೊದಲಿಗೆ ಕಾರ್ಯಕ್ರಮ ಹೋಸ್ಟ್ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಬೇಕಿತ್ತು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಪ್ರಜಾಪ್ರಭುತ್ವದಲ್ಲಿ ಹುಲ್ಲಿಗೂ ಬೆಳೆಯುವ ಹಕ್ಕಿದೆ. ಕತ್ತೆಗೂ ತಿನ್ನುವ ಹಕ್ಕಿದೆ ಎಂದು ನ್ಯಾಯಾಧೀಶ ಸೂರ್ಯಕಾಂತ್ ಖಾರವಾಗಿ ಉತ್ತರಿಸಿದ್ದಾರೆ.
ಆಕೆಯನ್ನು ಪತ್ರಕರ್ತೆಯ ಪೀಠದಲ್ಲಿ ಕೂರಿಸಲು ಸಾಧ್ಯವಿಲ್ಲ. ಟಿವಿ ಚರ್ಚೆ ಕಾರ್ಯಕ್ರಮಕ್ಕೆ ಹೋದಾಗ ನಮ್ಮ ಮಾತುಗಳು ಸಮಾಜದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೇ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಹೇಳಿಕೆಗಳು ಅವರ ಹಠಮಾರಿತನ ಮತ್ತು ಸೊಕ್ಕಿನ ಸ್ವಭಾವವನ್ನು ತೋರಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ: ನುಪೂರ್ ಶರ್ಮಾ ವಿರುದ್ಧ ಇಷ್ಟೊಂದು ಎಫ್ಐಆರ್ಗಳು ದಾಖಲಾದರೂ ದೆಹಲಿ ಪೊಲೀಸರು ಇನ್ನೂ ಯಾಕೆ ಯಾವುದೇ ಕ್ರಮ ಕೈಗೊಂಡಿಲ್ಲ. ದೆಹಲಿ ಪೊಲೀಸರು ಶರ್ಮಾ ಅವರಿಗೆ ರೆಡ್ ಕಾರ್ಪೆಟ್ ಹಾಸಿರಬೇಕು. ಉದಯಪುರದಲ್ಲಿ ಟೇಲರ್ ಕೊಲೆಯ ದುರದೃಷ್ಟ ಘಟನೆಗೆ ನುಪೂರ್ ಕಾರಣವಾಗಿದ್ದಾರೆ.
ಅವರ ಈ ಹೇಳಿಕೆಗಳನ್ನು ಅಗ್ಗದ ಪ್ರಚಾರಕ್ಕಾಗಿ, ರಾಜಕೀಯ ಅಜೆಂಡಾಕ್ಕಾಗಿ ಮಾಡಲಾಗಿದೆ. ನಮ್ಮನ್ನು ಕೇಳಿದರೆ, ಇಂತಹ ಹೇಳಿಕೆಗಳ ಅಗತ್ಯ ಇರಲಿಲ್ಲ ಎನ್ನಿಸುತ್ತದೆ. ಈಗ ದೇಶದಲ್ಲಿ ಏನಾಗುತ್ತಿದೆಯೋ ಅದಕ್ಕೆ ನೂಪುರ್ ಶರ್ಮಾ ಅವರೇ ಪೂರ್ಣ ಕಾರಣ. ನೀವು ಈ ದೇಶದ ಕ್ಷಮೆ ಕೇಳಲೇಬೇಕು ಎಂದು ಸುಪ್ರೀಂಕೋರ್ಟ್ ನುಪೂರ್ ಶರ್ಮಾ ಅವರಿಗೆ ತಾಕೀತು ಮಾಡಿತು.
ಇದನ್ನು ಓದಿ:16 ಬಂಡಾಯ ಶಾಸಕರ ಅಮಾನತು ಕೋರಿ ಸುಪ್ರೀಂಗೆ ಶಿವಸೇನಾ ಅರ್ಜಿ