ನವದೆಹಲಿ: ಹರಿಯಾಣದ ಸ್ಥಳೀಯ ಅಭ್ಯರ್ಥಿಗಳಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ.75ರಷ್ಟು ಮೀಸಲಾತಿ ಒದಗಿಸುವ ಹರಿಯಾಣ ಸರ್ಕಾರದ ಕಾನೂನಿಗೆ ತಡೆ ನೀಡಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಇಂದು ರದ್ದುಗೊಳಿಸಿದೆ.
ಈ ವಿಷಯದ ಕುರಿತು ಒಂದು ತಿಂಗಳೊಳಗೆ ತೀರ್ಮಾನಿಸುವಂತೆ ಹೈಕೋರ್ಟ್‌ಗೆ ತಿಳಿಸಿದ ಸುಪ್ರೀಂಕೋರ್ಟ್, ಸದ್ಯಕ್ಕೆ ಉದ್ಯೋಗದಾತರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಕಾನೂನನ್ನು ತಡೆಹಿಡಿಯಲು ನ್ಯಾಯಾಲಯವು ಸಾಕಷ್ಟು ಕಾರಣಗಳನ್ನು ನೀಡಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದುಪಡಿಸಿತು.
ಇದನ್ನೂ ಓದಿ: ಮೊದಲ ಪತ್ನಿಗೆ ಪತಿ ವಿಚ್ಛೇದನ ನೀಡದಿದ್ದರೆ 2ನೇ ಪತ್ನಿ ಪಿಂಚಣಿಗೆ ಅರ್ಹಳಲ್ಲ: ಬಾಂಬೆ ಹೈಕೋರ್ಟ್
ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗ ಮೀಸಲಾತಿ ನೀಡುವ ಹಾಗೂ ಗರಿಷ್ಠ ಮಾಸಿಕ ವೇತನ 30,000 ರೂ. ನೀಡುವ ಕಾನೂನನ್ನು ಹರಿಯಾಣ ಸರ್ಕಾರ ರಚಿಸಿತ್ತು. ಇದರ ವಿರುದ್ಧ ಫರಿದಾಬಾದ್ ಮತ್ತು ಗುರುಗಾವ್ ಸೇರಿದಂತೆ ರಾಜ್ಯದ ಇತರ ಭಾಗಗಳಿಂದ ಕೆಲ ಸಂಸ್ಥೆಗಳು ಸಲ್ಲಿಸಿದ ಅರ್ಜಿಗಳ ಮೇಲೆ ಹರಿಯಾಣ ಸರ್ಕಾರದ ಕಾನೂನಿಗೆ ಫೆಬ್ರವರಿ 3 ರಂದು ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು.