ನವದೆಹಲಿ: ರಾಷ್ಟ್ರ ರಾಜಧಾನಿಯ ಸೇವೆಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂಸತ್‌ನಿಂದ ಇತ್ತೀಚೆಗೆ ಅಂಗೀಕರಿಸಲ್ಪಟ್ಟ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿದ್ದುಪಡಿ ಮಾಡಲು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ಅನುಮತಿ ಕೊಟ್ಟಿದೆ.
ದೆಹಲಿ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಸಲ್ಲಿಸಿರುವ ಮನವಿ ಗಮನಿಸಿದ ಸುಪ್ರೀಂ ಕೋರ್ಟ್, ಈ ಮೊದಲು ಸುಗ್ರೀವಾಜ್ಞೆಗೆ ವಿರುದ್ಧವಾಗಿ ಅರ್ಜಿ ಹಾಕಲಾಗಿತ್ತು. ಅದು ಈಗ ಸಂಸತ್ತಿನ ಅನುಮತಿಯ ನಂತರ ಕಾನೂನಾಗಿ ಮಾರ್ಪಟ್ಟಿದೆ. ಹಾಗಾಗಿ ಅರ್ಜಿಯ ತಿದ್ದುಪಡಿ ಅವಶ್ಯಕ ಎಂದಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಅರ್ಜಿಗೆ ತಿದ್ದುಪಡಿ ಮಾಡಲು ಈ ಅನುಮತಿ ನೀಡಿದ್ದು, ಕೇಂದ್ರ ಸರ್ಕಾರ ಇದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದೆ. ತಿದ್ದುಪಡಿ ಮಾಡಿದ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಪೀಠವು ಕೇಂದ್ರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ದೆಹಲಿ ಸೇವೆಗಳ ಮಸೂದೆ ಎಂದು ಕರೆಯುವ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) ಸರ್ಕಾರದ (ತಿದ್ದುಪಡಿ) ಮಸೂದೆ 2023 ಅನ್ನು ಸಂಸತ್ತು ಇತ್ತೀಚೆಗೆ ಅಂಗೀಕರಿಸಿದೆ. ಭಾರಿ ವಿರೋಧ ಮತ್ತು ಅಸಮಾಧಾನದ ನಡುವೆ ದೆಹಲಿಯ ಉನ್ನತಾಧಿಕಾರಿಗಳ ನೇಮಕ, ವರ್ಗಾವಣೆ ಮತ್ತು ಕೆಲವು ವಿಶೇಷ ಅಧಿಕಾರಗಳನ್ನು ನೀಡುವ ಸುಗ್ರೀವಾಜ್ಞೆಯನ್ನು (ದೆಹಲಿ ಪ್ರದೇಶದ ಸರ್ಕಾರ ಮಸೂದೆ-2023 (ತಿದ್ದುಪಡಿ) ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಿತು.
ದೆಹಲಿಯ ಆಡಳಿತವನ್ನು ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸುಗ್ರೀವಾಜ್ಞೆ ವಿರುದ್ಧ ಆಮ್ ಆದ್ಮಿ ಪಕ್ಷದ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ, ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೋರ್ಟ್ ಇತ್ತೀಚೆಗೆ ಸಾಂವಿಧಾನಿಕ ಪೀಠಕ್ಕೂ ವರ್ಗಾಯಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿತ್ತು.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ಹಾಗೂ ದೆಹಲಿ ಸರ್ಕಾರದ ಪರವಾಗಿ ಅಭಿಷೇಕ್ ಸಿಂಘ್ವಿ ಅವರ ಸಂಕ್ಷಿಪ್ತ ವಾದ ಆಲಿಸಿದ ನ್ಯಾಯಪೀಠವು, "ನಾವು ಇದನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುತ್ತೇವೆ" ಎಂದು ಹೇಳಿತ್ತು. ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು.
ಕೇಂದ್ರ ಸರ್ಕಾರ ಜಾರಿಗೆ ತಂದ ಸುಗ್ರೀವಾಜ್ಞೆಯನ್ನು ಖಂಡಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಭಟನೆ ನಡೆಸಿದ್ದರು. ಸುಗ್ರೀವಾಜ್ಞೆಗೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕಾರ ಪಡೆಯದಂತೆ ತಡೆಯುವ ಪ್ರಯತ್ನದ ಭಾಗವಾಗಿ ಆಮ್ ಆದ್ಮಿ ಪಕ್ಷವು ಇತರ ಪ್ರತಿಪಕ್ಷಗಳ ನೆರವು ಕೋರಿತ್ತು. ಹಲವಾರು ರಾಜಕೀಯ ನಾಯಕರನ್ನೂ ಭೇಟಿ ಮಾಡಿ ಸಂಸತ್ತಿನಲ್ಲಿ ತಮಗೆ ಬೆಂಬಲ ನೀಡುವಂತೆಯೂ ಕೇಳಿಕೊಂಡಿತ್ತು. (ಪಿಟಿಐ)
ಇದನ್ನೂ ಓದಿ: Delhi ordinance row: ದೆಹಲಿ ಸುಗ್ರೀವಾಜ್ಞೆ ಕುರಿತ ಅರ್ಜಿ ವಿಚಾರಣೆ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್