ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಮತ್ತು ಆರ್‌ಪಿ ರವಿಚಂದ್ರನ್ ಸೇರಿದಂತೆ ಆರು ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಅವರು ಅವಧಿಪೂರ್ವ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಈ ಮುನ್ನ ಮುಂದೂಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ, ಸಂತನ್, ಮುರುಗನ್, ಎಜಿ ಪೆರಾರಿವಾಲನ್, ರಾಬರ್ಟ್ ಪಯಸ್, ಜಯಕುಮಾರ್ ಮತ್ತು ರವಿಚಂದ್ರನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, 23 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ.
ಈ ವರ್ಷದ ಆರಂಭದಲ್ಲಿ, ಸುಪ್ರೀಂ ಕೋರ್ಟ್ ಪೆರಾರಿವೆಲನ್ ಅವರನ್ನು ಬಿಡುಗಡೆ ಮಾಡಲು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಬಳಸಿತ್ತು.
ಕಳೆದ ತಿಂಗಳು ತಮಿಳುನಾಡು ಸರ್ಕಾರವು ಶ್ರೀಹರನ್ ಮತ್ತು ರವಿಚಂದ್ರನ್ ಅವರ ಅವಧಿಪೂರ್ವ ಬಿಡುಗಡೆಗೆ ಒಲವು ತೋರಿತ್ತು. ಅವರ ಜೀವಾವಧಿ ಶಿಕ್ಷೆಯನ್ನು ಹಿಂತೆಗೆದುಕೊಳ್ಳುವ 2018 ರ ತನ್ನ ಸಲಹೆಯನ್ನು ಪಾಲಿಸಲು ರಾಜ್ಯಪಾಲರು ಬದ್ಧರು ಎಂದು ಸರ್ಕಾರ ಹೇಳಿತ್ತು.
ನಳಿನಿ ಮತ್ತು ರವಿಚಂದ್ರನ್ ಇಬ್ಬರೂ ಡಿಸೆಂಬರ್ 27, 2021 ರಿಂದ ಇಲ್ಲಿಯವರೆಗೆ ತಮಿಳುನಾಡು ಸಸ್ಪೆನ್ಷನ್ ಆಫ್ ಸೆಂಟೆನ್ಸ್ ರೂಲ್ಸ್, 1982 ರ ಅಡಿಯಲ್ಲಿ ತಮಿಳುನಾಡು ಸರ್ಕಾರವು ಮಂಜೂರು ಮಾಡಿದ ಆದೇಶದಂತೆ ಪೆರೋಲ್ನಲ್ಲಿದ್ದಾರೆ.