ಹೈದರಾಬಾದ್ : ಫೆಬ್ರವರಿ 3, 2020ರಂದು ನಾಲ್ಕು ವಾರಗಳ ಕಾಲಾವಧಿಯಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಭಾರತದ ಸರ್ವೋನ್ನತ ನ್ಯಾಯಾಲಯ ನಿರ್ದೇಶಿಸಿದೆ. ಇಂದು ಸುಪ್ರೀಂಕೋರ್ಟ್ ಆ ಆದೇಶ ನೀಡಿ ಒಂದು ವರ್ಷವಾಗುತ್ತದೆ.
ಗ್ರಾಮ ನ್ಯಾಯಾಲಯಗಳು ಮತ್ತು ಅದರ ಮೂಲ ಕಾರ್ಯಗಳು :
114ನೇ ಕಾನೂನು ಆಯೋಗವು ತನ್ನ ವರದಿಯಲ್ಲಿ ನ್ಯಾಯವನ್ನು ಹೆಚ್ಚು ವೇಗವಾಗಿ ಮತ್ತು ಭಾರತದ ಅತ್ಯಂತ ಹಿಂದುಳಿದವರಿಗೆ ತಲುಪುವ ಉದ್ದೇಶದಿಂದ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಶಿಫಾರಸು ಮಾಡಿದೆ.
ಇವು ನ್ಯಾಯಾಲಯಗಳ ಹೊಸ ಶ್ರೇಣಿಯಾಗಬೇಕಿತ್ತು ಮತ್ತು 2008ರಲ್ಲಿ ಸಂಸತ್ತಿನಲ್ಲಿ ಗ್ರಾಮ ನ್ಯಾಯಾಲಯ ಕಾಯ್ದೆ ಅಂಗೀಕರಿಸಲಾಯಿತು. ಈ ಕಾಯ್ದೆ ಅಕ್ಟೋಬರ್ 2, 2009ರಂದು ಜಾರಿಗೆ ಬಂದಿತು. ಇವು ಹಲವಾರು ವಿಧಗಳಲ್ಲಿ ವಿಶಿಷ್ಟವಾಗಿರಬೇಕು. ನ್ಯಾಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೊಬೈಲ್ ನ್ಯಾಯಾಲಯಗಳಾಗಿರಬೇಕು.
ನ್ಯಾಯಾಧಿಕಾರರು ನ್ಯಾಯಾಂಗ ಅಧಿಕಾರಿಗಳಾಗಿದ್ದು, ಪ್ರಥಮ ದರ್ಜೆಯ ನ್ಯಾಯಾಂಗ ನ್ಯಾಯಾಧೀಶರಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ವೇತನವನ್ನು ಪಡೆಯುತ್ತಾರೆ ಮತ್ತು ಅದೇ ರೀತಿಯ ಅಧಿಕಾರ ಹೊಂದಿರುತ್ತಾರೆ. ರಾಜ್ಯ ಸರ್ಕಾರಗಳು ಅದರ ಹೈಕೋರ್ಟ್‌ನೊಂದಿಗೆ ಸಮಾಲೋಚಿಸಿ ಅವರನ್ನು ನೇಮಿಸಬೇಕಿತ್ತು.
ಈ ಸಂಸ್ಥೆಗಳು ಸಮನ್ವಯದ ಮೂಲಕ ಸಾಧ್ಯವಾದಷ್ಟು ಮಟ್ಟಿಗೆ ವಿವಾದಗಳನ್ನು ಬಗೆಹರಿಸುವ ಗುರಿ ಹೊಂದಿದ್ದವು ಮತ್ತು ಈ ಉದ್ದೇಶಕ್ಕಾಗಿ ಸಮಾಲೋಚಕರನ್ನು ನೇಮಿಸಬೇಕಾಗಿತ್ತು.
ಗ್ರಾಮ ನ್ಯಾಯಾಲಯಗಳು 1872ರ ಭಾರತೀಯ ಸಾಕ್ಷ್ಯ ಕಾಯ್ದೆಯಲ್ಲಿ ಒದಗಿಸಿದಂತೆ ಸಾಕ್ಷ್ಯದ ನಿಯಮಗಳಿಗೆ ಬದ್ಧರಾಗಿರುವುದಿಲ್ಲ. ಆದರೆ, ಆಯಾ ಹೈಕೋರ್ಟ್‌ಗಳು ರೂಪಿಸಿದ ನಿಯಮಗಳಿಗೆ ಒಳಪಟ್ಟಿರುತ್ತವೆ ಮತ್ತು ಬದಲಿಗೆ ನೈಸರ್ಗಿಕ ನ್ಯಾಯದ ತತ್ವಗಳಿಂದ ಮಾರ್ಗದರ್ಶಿಸಲ್ಪಡುತ್ತವೆ.
ಸಂಬಂಧಪಟ್ಟ ಹೈಕೋರ್ಟ್‌ನೊಂದಿಗೆ ಸಮಾಲೋಚಿಸಿ, ಅಧಿಸೂಚನೆಯ ಮೂಲಕ ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಿದ ಪ್ರದೇಶದ ಮೇಲೆ ಅವರಿಗೆ ಅಧಿಕಾರವಿದೆ.
ಗ್ರಾಮ ನ್ಯಾಯಾಲಯಗಳ ಪ್ರಸ್ತುತ ಸ್ಥಿತಿ : 2019ರ ಸೆಪ್ಟೆಂಬರ್‌ನಲ್ಲಿ ದಿ ನ್ಯಾಷನಲ್ ಫೆಡರೇಶನ್ ಆಫ್ ಸೊಸೈಟೀಸ್ ಫಾರ್ ಫಾಸ್ಟ್ ಜಸ್ಟೀಸ್ ಎಂಬ ಎನ್‌ಜಿಒ ಸುಪ್ರೀಂಕೋರ್ಟ್‌ಗೆ ಪಿಐಎಲ್ ಸಲ್ಲಿಸಿತು. 2017ರಲ್ಲಿ 12ನೇ ಪಂಚವಾರ್ಷಿಕ ಯೋಜನೆ ಅವಧಿಯ ಅಂತ್ಯದ ವೇಳೆಗೆ ಸ್ಥಾಪಿಸಬೇಕಾದ 2,500 ಗ್ರಾಮ ನ್ಯಾಯಾಲಯಗಳ ಉದ್ದೇಶಿತ ಅವಶ್ಯಕತೆಯ ವಿರುದ್ಧ ಕೇವಲ 11 ರಾಜ್ಯ ಸರ್ಕಾರಗಳು 320ಕ್ಕೆ ಸೂಚನೆ ನೀಡಿವೆ ಎಂದು ಅದು ಹೇಳಿದೆ.
2019ರ ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ ಕೇವಲ 204 ಗ್ರಾಮ ನ್ಯಾಯಾಲಯಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಕಳೆದ ಒಂದು ದಶಕದಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಯಾವುದೇ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸದೇ ಇರಲು 18 ರಾಜ್ಯಗಳು ಆಯ್ಕೆ ಮಾಡಿಕೊಂಡಿವೆ.
ಪಿಐಎಲ್‌ಗೆ ಪ್ರತಿಕ್ರಿಯೆಯಾಗಿ, ಈ ಮನವಿಗೆ ಸ್ಪಂದಿಸುವಂತೆ ಕೋರಿ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ನಾಲ್ಕು ತಿಂಗಳ ನಂತರ 2020ರ ಫೆಬ್ರವರಿಯಲ್ಲಿ, ಸುಪ್ರೀಂ ಕೋರ್ಟ್ ಆ 18 ರಾಜ್ಯಗಳಿಗೆ ನಿರ್ದೇಶನ ನೀಡಿತು. ಸಂಬಂಧಪಟ್ಟ ತಮ್ಮ ರಾಜ್ಯ ಸರ್ಕಾರಗಳೊಂದಿಗೆ ಪ್ರಗತಿ ಮತ್ತು ಸಮಾಲೋಚನೆಯನ್ನು ತ್ವರಿತಗೊಳಿಸಲು ಆಯಾ ಹೈಕೋರ್ಟ್‌ಗಳಿಗೆ ಸೂಚನೆ ನೀಡಲಾಯಿತು.
ಅಂತಹ ಅಧಿಸೂಚನೆಯನ್ನು ಹೊರಡಿಸಿದ ರಾಜ್ಯಗಳಲ್ಲಿಯೂ ಸಹ, ಅರ್ಧದಷ್ಟು ಗ್ರಾಮ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಅಂಶದ ಕುರಿತು ಎರಡು ನ್ಯಾಯಾಧೀಶರ ಪೀಠವು ಆಕ್ರೋಶ ವ್ಯಕ್ತಪಡಿಸಿತು.
ಸಂಸತ್ತಿನ ತೀರಾ ಇತ್ತೀಚೆಗೆ ಮುಕ್ತಾಯಗೊಂಡ ಮಾನ್ಸೂನ್ ಅಧಿವೇಶನದಲ್ಲಿ, ಕಾನೂನು ಮತ್ತು ನ್ಯಾಯ ಸಚಿವರು ದೇಶದಲ್ಲಿ ಗ್ರಾಮ ನ್ಯಾಯಾಲಯಗಳ ಸ್ಥಾಪನೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ವಿವರವಾದ ಪ್ರತಿಕ್ರಿಯೆಯನ್ನು ನೀಡಿದ್ದು, ಅದೇ ಪ್ರಶ್ನೆಗೆ ಉತ್ತರಿಸಿದ್ದಾರೆ. ಸರ್ಕಾರದೊಂದಿಗೆ ಲಭ್ಯವಿರುವ ಇತ್ತೀಚಿನ ದಾಖಲೆಗಳ ಪ್ರಕಾರ, ಭಾರತದ 12 ರಾಜ್ಯಗಳು ಈವರೆಗೆ 395 ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಸೂಚನೆ ನೀಡಿವೆ.
ನ್ಯಾಯ ವಿತರಣಾ ಸಂಸ್ಥೆಗಳಾಗಿ ಗ್ರಾಮ ನ್ಯಾಯಾಲಯಗಳನ್ನು ರಚಿಸುವುದು ಯೋಜಿಸಿದಷ್ಟರ ಮಟ್ಟಿಗೆ ಸಫಲವಾಗಿಲ್ಲ. ಹಣಕಾಸು ಮತ್ತು ರಾಜ್ಯ ಸಾಮರ್ಥ್ಯದ ಸಾಮಾನ್ಯ ನಿರ್ಬಂಧಗಳು ಸಹಜವಾಗಿಯೇ ಉಳಿದಿವೆ. ಗ್ರಾಮ ನ್ಯಾಯಾಲಯಗಳಿಗೆ ಪ್ರಕರಣಗಳನ್ನು ತರುವಲ್ಲಿ ಪೊಲೀಸ್ ಅಧಿಕಾರಿಗಳು, ವಕೀಲರು ಮತ್ತು ಇತರ ಕಾರ್ಯಕರ್ತರೂ ಹಿಂಜಿರಿಯುತ್ತಿದ್ದಾರೆ.
ಅನೇಕ ರಾಜ್ಯಗಳು ಮುಂದುವರಿದು, ತಾಲೂಕು ಮಟ್ಟದಲ್ಲಿ ನಿಯಮಿತ ನ್ಯಾಯಾಲಯಗಳನ್ನು ಸ್ಥಾಪಿಸಿವೆ. ಅದರೆ ಅಧಿಸೂಚನೆಯನ್ನು ಹೊರಡಿಸಿದ ರಾಜ್ಯಗಳಲ್ಲಿಯೂ, ಕೇವಲ ಅರ್ಧದಷ್ಟು ಗ್ರಾಮ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಅಂಶದ ಕುರಿತು ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.