ನವದೆಹಲಿ: ಬಾಕಿ ಉಳಿದಿರುವ ಪ್ರಕರಣಗಳ ಅಂತಿಮ ವಿಚಾರಣೆಗಾಗಿ ಸೆಪ್ಟೆಂಬರ್ 1ರಿಂದ ಭೌತಿಕ ಸ್ವರೂಪದಲ್ಲಿ ಕಲಾಪ ನಡೆಸುವ ಕುರಿತು ಸುಪ್ರೀಂಕೋರ್ಟ್ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಮಾರ್ಗಸೂಚಿಯನ್ವಯ ಕಲಾಪದ ಸ್ವರೂಪ ಕುರಿತು ಅರ್ಜಿದಾರರು, ವಕೀಲರಿಗೆ ಹೈಬ್ರಿಡ್ ಆಯ್ಕೆಯ ಅವಕಾಶ ಇರಲಿದೆ. ಭೌತಿಕ ಕಲಾಪ ಆಯ್ಕೆ ಮಾಡಿಕೊಂಡ ಪ್ರಕರಣಗಳ ವಿಚಾರಣೆ ಮಂಗಳವಾರದಿಂದ ಗುರುವಾರದವರೆಗೆ ನಡೆಯಲಿದೆ. ಕಟ್ಟುನಿಟ್ಟಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಲಿದ್ದು, ಭೌತಿಕ ವಿಚಾರಣೆ ಆರಂಭಕ್ಕೂ 10 ನಿಮಿಷ ಮೊದಲು ಪ್ರಕರಣಕ್ಕೆ ಸಂಬಂಧಿಸಿದವರು ಕೋರ್ಟ್ ಸಭಾಂಗಣಕ್ಕೆ ಬರಬೇಕು.
ಸುಪ್ರೀಂಕೋರ್ಟ್‌ನ ಸೆಕ್ರೆಟರಿ ಜನರಲ್ ಬಿಡುಗಡೆ ಮಾಡಿದ ಮಾರ್ಗಸೂಚಿ ನಿಯಮಗಳ ಅನುಸಾರ, ಪಟ್ಟಿ ಮಾಡಲಾದ, ಭೌತಿಕ ವಿಚಾರಣೆಗೆ ಆಯ್ಕೆಯಾಗದ ಪ್ರಕರಣಗಳ ವಿಚಾರಣೆಯ ಪ್ರಕ್ರಿಯೆಯು ಸೋಮವಾರದಿಂದ ಶುಕ್ರವಾರದವರೆಗೆ ವರ್ಚುವಲ್ ಮಾದರಿಯಲ್ಲಿಯೇ ಮುಂದುವರಿಯಲಿದೆ.
ಅರ್ಜಿದಾರರು, ವಕೀಲರು ಪ್ರಕರಣದ ಭೌತಿಕ ಸ್ವರೂಪದ ವಿಚಾರಣೆ (ಹೈಬ್ರಿಡ್) ಆಯ್ಕೆ ಮಾಡಿಕೊಂಡರೆ, ವರ್ಚುವಲ್ ಸ್ವರೂಪದ ವಿಚಾರಣೆ ಆಯ್ಕೆಗೆ ಅವಕಾಶ ಇರುವುದಿಲ್ಲ. ಭೌತಿಕ ವಿಚಾರಣೆ ನಡೆಸುವ ಪೀಠ, ಸಭಾಂಗಣವನ್ನು ಸ್ಯಾನಿಟೈಸ್‌ಗಾಗಿ 15 ನಿಮಿಷ ಬಿಡುವು ಪಡೆಯುವ ಬಗ್ಗೆಯೂ ತೀರ್ಮಾನಿಸಬಹುದು.
ದೇಶದಲ್ಲಿ ಕೋವಿಡ್ ಕಾಣಿಸಿಕೊಂಡ ನಂತರ ಕಳೆದ ವರ್ಷದ ಮಾರ್ಚ್ ತಿಂಗಳಿಂದ ಸುಪ್ರೀಂಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಪ್ರಕರಣಗಳ ವಿಚಾರಣೆ ನಡೆಸುತ್ತಿದೆ. ಭೌತಿಕ ಸ್ವರೂಪದಲ್ಲಿ ಕಲಾಪವನ್ನು ಪುನರಾರಂಭಿಸಬೇಕು ಎಂದು ವಿವಿಧ ವಕೀಲರ ಸಂಘಗಳು, ವಕೀಲರು ಒತ್ತಾಯಿಸಿದ್ದರು.
ನ್ಯಾಯಮೂರ್ತಿಗಳ ಸಮಿತಿಯ ಶಿಫಾರಸು ಆಧರಿಸಿ, ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನಿರ್ದೇಶನದನ್ವಯ ಮಾರ್ಗಸೂಚಿ ಹೊರಡಿಸಲಾಗಿದೆ. ಭೌತಿಕ ವಿಚಾರಣೆ ಆರಂಭಿಸಬೇಕು ಎಂಬ ವಕೀಲರ ಸಂಘಗಳ ಮನವಿ ಹಿನ್ನೆಲೆ ಈ ಕುರಿತು ಪರಿಶೀಲಿಸಲು ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಲಾಗಿತ್ತು.