ನವದೆಹಲಿ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ವಿಚಾರವಾಗಿ ವಕ್ಫ್ ಬೋರ್ಡ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ವಕ್ಫ್ ಪರ ಕಪಿಲ್ ಸಿಬಲ್ ಹಾಗು ರಾಜ್ಯ ಸರ್ಕಾರದ ಪರವಾಗಿ ಮುಕುಲ್ ರೋಹ್ಟಗಿ ಅವರ ವಾದ-ಪ್ರತಿವಾದ ಆಲಿಸಿರುವ ಸುಪ್ರೀಂ ಕೋರ್ಟ್‌ನ ನ್ಯಾ.ಇಂದಿರಾ ಬ್ಯಾನರ್ಜಿ, ನ್ಯಾ.ಎ ಎಸ್ ಓಕಾ ಹಾಗು ನ್ಯಾ. ಎಂ ಎಂ ಸುಂದರೇಶ್ ಅವರಿದ್ದ ತ್ರಿಸದಸ್ಯ ಪೀಠ, ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿ, ಗಣೇಶೋತ್ಸವ ಬೇರೆ ಕಡೆ ಮಾಡಿ. ಮೈದಾನದಲ್ಲಿ ಮುಂದಿನ 2 ದಿನಗಳ ಕಾಲ ಮಧ್ಯಂತರ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ತದನಂತರ ಕರ್ನಾಟಕ ಹೈಕೋರ್ಟ್ನಲ್ಲಿ ಮತ್ತೊಮ್ಮೆ ಪ್ರಶ್ನಿಸಬಹುದು ಎಂದು ಆದೇಶಿಸಿದರು.
ಇದಕ್ಕೂ ಮುನ್ನ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಗುಪ್ತ ಮತ್ತು ನ್ಯಾ.ಸುಧಾಂಶು ಧುಲಿಯಾ ಪೀಠದಲ್ಲಿ ಒಮ್ಮತ ಮೂಡಿರಲಿಲ್ಲ. ಹೀಗಾಗಿ, ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ಶಿಫಾರಸು ಮಾಡಿತ್ತು. ಈ ವೇಳೆ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರು ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಹೊಸ ಪೀಠ ರಚಿಸಿದ್ದರು.
ಮುಸ್ಲಿಂ ವಕ್ಫ್ ಬೋರ್ಡ್ ಪರ ವಕೀಲ ಕಪಿಲ್ ಸಿಬಲ್ ವಾದ:
1. ಈದ್ಗಾ ಮೈದಾನದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗೆ ಅವಕಾಶ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ.
2. ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಈ ರೀತಿಯಾಗಿ ತುಳಿಯಬಹುದು ಎಂಬ ಭಾವನೆಯ ತೀರ್ಪು ನೀಡಬೇಡಿ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು.
3. ಈ ಮೈದಾನದಲ್ಲಿ ಬೇರೆ ಯಾವುದೇ ಸಮುದಾಯದ ಧಾರ್ಮಿಕ ಕಾರ್ಯಕ್ರಮಗಳು ಈವರೆಗೆ ನಡೆದಿಲ್ಲ. ಕಾನೂನಿನ ಪ್ರಕಾರ ಇದು ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. 2002ರ ನಂತರ ಇಂದು ವಿವಾದಿತ ಭೂಮಿ.
4. ಮುಸ್ಲಿಂ ಮತ್ತು ಹಿಂದೂ ಸಮುದಾಯದ ನಡುವೆ ವಿವಾದವಿದೆ. ಈ ಜಮೀನು ಕಂದಾಯ ಇಲಾಖೆಗೆ ಸೇರಿದೆ ಎಂದು ಹೇಳಲಾಗ್ತಿದೆ. ಈ ವಿಚಾರದಲ್ಲಿ ಬಾಬರಿ ಮಸೀದಿ ಬಗ್ಗೆ ಉಲ್ಲೇಖ ಮಾಡಿರುವುದು ತುಂಬಾ ಗೊಂದಲ ಮೂಡಿಸಿದೆ. ನಮ್ಮನ್ನು ಆಳುವ ಪ್ರಭುಗಳು ಇದನ್ನು ನಿಲ್ಲಿಸಬೇಕು.
5. ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಅನೇಕ ಕೋಮು ಗಲಭೆಗಳಿಗೆ ಕಾರಣವಾಗಿದೆ. ಈ ಮೈದಾನದಲ್ಲಿ ಆಜಾನ್, ರಂಜಾನ್ ಹಾಗೂ ಈದ್ ಆಚರಣೆಗೆ ಮಾತ್ರ ಅವಕಾಶವಿದೆ. ಬೇರೆ ಉದ್ದೇಶಗಳಿಗೆ ಮೈದಾನ ಬಳಕೆಗೆ ನಮ್ಮ ಆಕ್ಷೇಪವಿದೆ. ಮೈಸೂರು ರಾಜ್ಯದ ದಾಖಲೆಗಳಲ್ಲಿಯೂ ಇದು ಈದ್ಗಾ ಮೈದಾನ ಎಂದು ಉಲ್ಲೇಖ.
ರಾಜ್ಯ ಸರ್ಕಾರದ ಪರ ವಕೀಲ ಮುಕುಲ್ ರೋಹಟಗಿ ಪ್ರತಿ ವಾದ:
1. ಕಳೆದ 200 ವರ್ಷಗಳಿಂದ ಈ ಭೂಮಿ ಮಕ್ಕಳ ಆಟದ ಮೈದಾನವಾಗಿ ಬಳಕೆ ಮಾಡಲಾಗ್ತಿದೆ. ದೆಹಲಿಯಲ್ಲಿ ದಸರಾ ಪ್ರತಿಕೃತಿಯನ್ನು ಎಲ್ಲೆಂದರಲ್ಲಿ ದಹಿಸುವುದಿಲ್ಲವೇ?. ಹಿಂದೂ ಹಬ್ಬವನ್ನು ಮಾಡಬೇಡಿ ಎಂದು ಜನರು ಹೇಳುತ್ತಾರೆಯೇ?, ನಾವು ಸ್ವಲ್ಪ ವಿಶಾಲ ಮನೋಭಾವದಿಂದ ಪ್ರಕರಣವನ್ನು ನೋಡಬೇಕು.
2. ಈ ಹಿಂದೆ ಯಾವಾಗಲಾದರೂ ಗಣೇಶ ಉತ್ಸವ ಆಚರಣೆಗೆ ಸರಕಾರ ಆದೇಶ ನೀಡಿತ್ತೇ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದಕ್ಕೆ, ಈ ಹಿಂದೆ ಸರಕಾರವಾಗಲಿ, ಬಿಬಿಎಂಪಿ ಇಂತಹ ಆದೇಶ ನೀಡಿರಲಿಲ್ಲ ಎಂದು ಮುಕುಲ್ ಹೇಳಿದರು.
3. ಕಾನೂನಿನ ಪ್ರಕಾರ, ಈ ಆಸ್ತಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. 1987 ನಿಂದಲೂ ಪಹಣಿಯಲ್ಲಿ ಸರ್ಕಾರಿ ಆಸ್ತಿ ಎಂದು ದಾಖಲೆಗಳಿದೆ. ಕಂದಾಯ ಮತ್ತು ಬಿಬಿಎಂಪಿ ದಾಖಲೆಗಳಲ್ಲಿ ಜಮೀನು ಆಟದ ಮೈದಾನ ಎಂದು ನಮೂದಿಸಲಾಗಿದೆ. ಇದು ಸರ್ಕಾರಿ ಭೂಮಿ.
ಚಾಮರಾಜಪೇಟೆ ಮೈದಾನಕ್ಕೆ ಬಿಗಿ ಬಂದೋಬಸ್ತ್: ಚಾಮರಾಜಪೇಟೆ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 3 ಡಿಸಿಪಿ, 21 ಎಸಿಪಿ, 47 ಇನ್ಸ್ಪೆಕ್ಟರ್ಗಳು, 130 ಪಿಎಸ್ಐ, 126 ASI, 900 ಕಾನ್ಸ್ಟೇಬಲ್ಗಳು, 120 RAF ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.