ನವದೆಹಲಿ: ಸೇನೆಯಲ್ಲಿ ಶಾಶ್ವತ ಆಯೋಗ ಪಡೆಯಲು ಮಹಿಳೆಯರಿಗೆ ವೈದ್ಯಕೀಯ ಅರ್ಹತೆಯ ಅವಶ್ಯಕತೆಯು 'ಏಕಪಕ್ಷೀಯ' ಮತ್ತು 'ಅತಾರ್ಕಿಕ' ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸೇನೆಯಲ್ಲಿ ಶಾಶ್ವತ ಆಯೋಗಕ್ಕಾಗಿ ಸುಮಾರು 80 ಮಹಿಳಾ ಅಧಿಕಾರಿಗಳು ಸಲ್ಲಿಸಿದ ಅರ್ಜಿ ವಿಚಾರಣೆಯ ಬಳಿಕ ಸುಪ್ರೀಂಕೋರ್ಟ್ ಇಂದು ತನ್ನ ತೀರ್ಪು ಪ್ರಕಟಿಸಿತು.
ನಮ್ಮ ಸಮಾಜದ ರಚನೆಯು ಪುರುಷರಿಂದ ಪುರುಷರಿಗಾಗಿದೆ ಎಂಬುದನ್ನು ನಾವು ಇಲ್ಲಿ ಗುರುತಿಸಬೇಕು ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಮೂಲಸೌಕರ್ಯ ಅಭಿವೃದ್ಧಿಗೆ ಇನ್ನೊಂದು ಬ್ಯಾಂಕ್
ಸೇನೆಯ ಆಯ್ದ ವಾರ್ಷಿಕ ಗೌಪ್ಯ ವರದಿ (ಎಸಿಆರ್) ಮೌಲ್ಯಮಾಪನ ಮತ್ತು ವೈದ್ಯಕೀಯ ಫಿಟ್ನೆಸ್ ಮಾನದಂಡದ ವಿಳಂಬ ಅನುಷ್ಠಾನವು ಮಹಿಳಾ ಅಧಿಕಾರಿಗಳ ವಿರುದ್ಧ ತಾರತಮ್ಯ ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.
ಮೌಲ್ಯಮಾಪನದ ಮಾದರಿಯು ಎಸ್ಎಸ್ಸಿ (ಶಾರ್ಟ್ ಸರ್ವೀಸ್ ಕಮಿಷನ್) ಮಹಿಳಾ ಅಧಿಕಾರಿಗಳಿಗೆ ಆರ್ಥಿಕ ಮತ್ತು ಮಾನಸಿಕ ಹಾನಿ ಉಂಟುಮಾಡುತ್ತದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರಿದ್ದ ದ್ವಿಸದಸ್ಯ ನ್ಯಾಯಪೀಠ ಹೇಳಿತು.
ನ್ಯಾಯಾಲಯದ ಈ ಹಿಂದಿನ ತೀರ್ಪನ್ನು ಪಾಲಿಸದವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳು ಒತ್ತಾಯಿಸಿದರು.
ಹಲವು ಮಹಿಳಾ ಅಧಿಕಾರಿಗಳು ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಹಲವರು ಸಾಗರೋತ್ತರ ಕಾರ್ಯಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.