ನವದೆಹಲಿ: ವಿದೇಶಾಂತ ಖಾತೆ ಸಚಿವ ಡಾ.ಎಸ್.ಜೈ.ಶಂಕರ್ ಗುಜರಾತ್‌ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಕಳೆದ ಬಾರಿ ರಾಜ್ಯಸಭಾ ಉಪಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು.
ರಾಜ್ಯಸಭೆಯಲ್ಲಿ ಅನಿಯತ ಮತ್ತು ನಿಯತ ಖಾಲಿ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದ್ದು, ಅದು ಕಾನೂನಿನ ಉಲ್ಲಂಘನೆ ಎಂದು ಕಾಂಗ್ರೆಸ್ ಮುಖಂಡ ಗೌರವ್ ಪಾಂಡ್ಯ ಅರ್ಜಿ ಸಲ್ಲಿಸಿದ್ದರು.
ಪ್ರತ್ಯೇಕ ದಿನಗಳಲ್ಲಿ ತೆರವಾದ ರಾಜ್ಯಸಭಾ ಸ್ಥಾನಗಳಿಗೆ ಒಂದೇ ಉಪಚುನಾವಣೆಯ ಮೂಲಕ ಚುನಾವಣೆ ನಡೆಸಬೇಕು ಎಂಬುದಾಗಿ ಸಂವಿಧಾನ ಅಥವಾ ಜನಪ್ರತಿನಿಧಿ ಕಾಯಿದೆಯಡಿ ಯಾವುದೇ ನಿಬಂಧನೆಗಳಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ. ಗುಜರಾತ್‌ನಿಂದ ರಾಜ್ಯಸಭೆಗೆ ಚುನಾಯಿತರಾದಾಗ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಕೂಡ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
2019ರ ಸೆಪ್ಟೆಂಬರ್‌ನಲ್ಲಿ ಗುಜರಾತ್ ಹೈಕೋರ್ಟ್ ಪಾಂಡ್ಯ ಅವರ ಮನವಿಯನ್ನು ವಜಾಗೊಳಿಸಿತ್ತು. ತಾವು ಚುನಾವಣೆಯಲ್ಲಿ ಮತದಾರನಲ್ಲ ಅಥವಾ ಅಭ್ಯರ್ಥಿಯಲ್ಲ ಎಂಬ ಕಾರಣಕ್ಕೆ ಸೀಮಿತಗೊಂಡು ಹೈಕೋರ್ಟ್ ತೀರ್ಪು ನೀಡಿದ್ದು ಇದು ಕಾನೂನಾತ್ಮಕ ದೋಷ ಎಂದು ಪಾಂಡ್ಯ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದರು.