ಸೂರತ್: ದೇಶದ ವಜ್ರದ ರಾಜಧಾನಿ ಸೂರತ್ ನಗರದಲ್ಲಿ ತಯಾರಿಸಿದ ಸೂರ್ಯಕಾಂತಿ ವಿನ್ಯಾಸದ ಡೈಮಂಡ್ ರಿಂಗ್ ಈಗ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದೆ. ಅತ್ಯಾಧುನಿಕ ವಜ್ರ, ಚಿನ್ನದ ಆಭರಣಗಳನ್ನು ಉತ್ಪಾದಿಸುವುದರಲ್ಲಿ ಸೂರತ್ ವಿಶ್ವದಲ್ಲೇ ಖ್ಯಾತಿ ಪಡೆದಿದೆ.
6.44 ಕೋಟಿ ರೂಪಾಯಿ ಬೆಲೆ ಬಾಳುವ ಸೂರ್ಯಕಾಂತಿ ವಿನ್ಯಾಸದ ಡೈಮಂಡ್ ರಿಂಗ್ ಇಂದು ಜಗತ್ತನ್ನೇ ಬೆರಗುಗೊಳಿಸಿದೆ. ವಜ್ರದುಂಗುರ ಜನರನ್ನು ತನ್ನತ್ತ ಆಕರ್ಷಿಸುತ್ತಿದ್ದು, ಸೂರತ್ ನಗರದ ವಜ್ರ ವೈಢೂರ್ಯಗಳಿಗೆ ಜಗತ್ತಿನಲ್ಲೆಡೆ ಬೇಡಿಕೆ ಹೆಚ್ಚಾಗಲಿದೆ. ಸೂರತ್‌ನ ಎಚ್‌ಕೆ ಡಿಸೈರ್ಸ್ ತಯಾರಿಸಿದ ಉಂಗುರಕ್ಕೆ 50,907 ವಜ್ರದ ಹರಳುಗಳನ್ನು ಅಳವಡಿಸಲಾಗಿದೆ. 460.55 ಗ್ರಾಂ ಚಿನ್ನ ಮತ್ತು 130.19 ಕ್ಯಾರೆಟ್ ವಜ್ರಗಳಿಂದ ವಿನ್ಯಾಸಗೊಳಿಸಲಾಗಿದೆ. ಉಂಗುರ ನೋಡಲು ಆಕರ್ಷಕ, ವಿಶಿಷ್ಟವಾಗಿದ್ದು, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದೆ.
ಹರಿಕೃಷ್ಣ ಎಕ್ಸ್‌ಪೋರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಘನಶ್ಯಾಂಭೈ ಧೋಲಾಕಿಯಾ ಮಾತನಾಡಿ, "ಈ ಉಂಗುರವನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಸಿದ್ದಗೊಳಿಸಿದ್ದೇವೆ. ನಾಶಗೊಳ್ಳುತ್ತಿರುವ ಪರಿಸರ ಉಳಿಸುವುದಕ್ಕಾಗಿ, ಜಗತ್ತಿಗೆ ಪರಿಸರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಜ್ರದ ಉಂಗುರ ಸಿದ್ದಗೊಳಿಸಲಾಗಿದೆ. ಈ ಉಂಗುರದಲ್ಲಿ 50,907 ವಜ್ರಗಳಿವೆ. ನಾವು 50,907 ಮರಗಳನ್ನು ನೆಡುವ ಉದ್ದೇಶವನ್ನೂ ಹೊಂದಿದ್ದೇವೆ" ಎಂದರು.
"ಆಕರ್ಷಕ ಉಂಗುರ ತಯಾರಿಸಲು ಸಂಪೂರ್ಣ ಮರುಬಳಕೆಯ ಚಿನ್ನವನ್ನು ಬಳಸಲಾಗಿದೆ. ಇದಕ್ಕಾಗಿ 18 ಕ್ಯಾರೆಟ್ ಚಿನ್ನವನ್ನು 8 ಭಾಗಗಳಾಗಿ ವಿಂಗಡಿಸಲಾಗಿದೆ. ಸೂರ್ಯಕಾಂತಿ ಹೂವಿನ ಮೇಲೆ ಚಿಟ್ಟೆ ಕುಳಿತಿರುವ ಆಕಾರದಲ್ಲಿ ಉಂಗುರವಿದೆ. ಇದನ್ನು ತಯಾರಿಸಲು ಒಟ್ಟು 9 ತಿಂಗಳು ಬೇಕಾಯಿತು" ಎನ್ನುತ್ತಾರೆ ಹರಿಕೃಷ್ಣ ಎಕ್ಸ್‌ಪೋರ್ಟ್ಸ್‌ನ ವ್ಯವಸ್ಥಾಪಕರು.
ಇದನ್ನೂಓದಿ: ನಿರೀಕ್ಷೆ ಮೀರಿ ಬೆಳೆದ ಚೀನಾ ಆರ್ಥಿಕತೆ: ಕೊರೊನಾ ಬಿಕ್ಕಟ್ಟಿನಿಂದ ಹೊರಬಂದ ಡ್ರ್ಯಾಗನ್