ನವದೆಹಲಿ: ಭಾರತ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದ ಬೆನ್ನಲ್ಲೇ ಭಾರತದಲ್ಲಿ ಬಹುಸಂಖ್ಯಾತರ ಪ್ರಾಬಲ್ಯ ಮತ್ತು ವಿಭಜಕತೆ ವಿಚಾರದಲ್ಲಿ ಪ್ರತಿಪಕ್ಷ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ-ಕಾಂಗ್ರೆಸ್ ಮಧ್ಯೆ ಮಾತಿನ ಸಮರ ಆರಂಭವಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದು ಮತ್ತು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದನ್ನು ನೆನಪಿಸಿರುವ ಬಿಜೆಪಿ, ಕಾಂಗ್ರೆಸ್ಗೆ ಬಲವಾದ ಎದಿರೇಟು ನೀಡಿದೆ.
2004ರಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆ ಗೆದ್ದ ನಂತರ ಇಟಲಿ ಮೂಲದ ಸೋನಿಯಾ ಗಾಂಧಿ ಪ್ರಧಾನಿಯಾಗುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು ಮತ್ತು ಬ್ರಿಟನ್‌ನ ಆಡಳಿತಾರೂಢ ಪಕ್ಷವು ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿದ್ದನ್ನು ಕಾಂಗ್ರೆಸ್ ಹೋಲಿಕೆ ಮಾಡಿದ್ದನ್ನು ಬಿಜೆಪಿ ಸಾರಾಸಗಟಾಗಿ ತಿರಸ್ಕರಿಸಿದೆ.
ಇಟಲಿ ಮೂಲದ ಸೋನಿಯಾ (ರಾಜೀವ್ ಅವರೊಂದಿಗೆ ಮದುವೆಯಾದ ನಂತರ ಹಲವಾರು ದಶಕಗಳವರೆಗೆ ಭಾರತೀಯ ಪೌರತ್ವವನ್ನು ಪಡೆಯಲು ನಿರಾಕರಿಸಿದ್ದರು) ಮತ್ತು ಯುಕೆ ಮೂಲದ ರಿಷಿ ಭಾರತೀಯ ವಂಶಸ್ಥರ ನಡುವೆ ವ್ಯತ್ಯಾಸ ಗುರುತಿಸಲು ಸಾಧ್ಯವಿಲ್ಲ ಎಂದು ಬಿಜೆಪಿಯ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥ ವಿಜಯ್ ಚೌತೈವಾಲೆ ಟ್ವಿಟರ್ ಬಳಕೆದಾರರೊಬ್ಬರಿಗೆ ಪ್ರತಿಕ್ರಿಯಿಸಿದ್ದಾರೆ.
ಸುನಕ್ ಪ್ರಧಾನಿಯಾದ ವಿಚಾರ ಬಳಸಿಕೊಂಡು ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ ನಂತರ ಬಿಜೆಪಿ ನಾಯಕರು ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಭಾರತೀಯ ಮೂಲದ ಸುನಕ್ ಅವರು ಬ್ರಿಟನ್‌ನ ಪ್ರಧಾನಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಕ್ಷಣವಾಗಿದೆ. ಬ್ರಿಟನ್ ಜನಾಂಗೀಯ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬರನ್ನು ತನ್ನ ಪ್ರಧಾನ ಮಂತ್ರಿಯಾಗಿ ಒಪ್ಪಿದೆ ಎಂಬುದನ್ನು ಈ ಮೂಲಕ ನಾವು ಗಮನಿಸಬೇಕು. ಆದರೆ ನಾವು ಮಾತ್ರ ಈವರೆಗೂ ಎನ್ಆರ್ಸಿ ಮತ್ತು ಸಿಎಎನಂಥ ವಿಭಜಕ ಮತ್ತು ತಾರತಮ್ಯದ ಕಾನೂನುಗಳ ಸಂಕೋಲೆಯಲ್ಲಿದ್ದೇವೆ ಎಂದು ಪಿಡಿಪಿ ಅಧ್ಯಕ್ಷೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಾದ ಪಿ. ಚಿದಂಬರಂ ಮತ್ತು ಶಶಿ ತರೂರ್ ಕೂಡ ಸುನಕ್ ಪ್ರಧಾನಿಯಾಗಿದ್ದನ್ನು ಸ್ವಾಗತಿಸಿದ್ದು, ಮುಂದೊಂದು ದಿನ ಈ ಪದ್ಧತಿಯನ್ನು ದೇಶದಲ್ಲಿ ಅಳವಡಿಸಿಕೊಳ್ಳಬೇಕೆಂದು ಆಶಿಸಿದ್ದಾರೆ. ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಕೂಡ ಈ ಕ್ರಮವನ್ನು ಸ್ವಾಗತಿಸಿದ್ದು, ಭಾರತ ಸಹ ಹೆಚ್ಚು ಸಹಿಷ್ಣು ದೇಶವಾಗಲಿ ಎಂದಿದ್ದಾರೆ.
ಮೊದಲು ಕಮಲಾ ಹ್ಯಾರಿಸ್, ಈಗ ರಿಷಿ ಸುನಕ್. ಅಮೆರಿಕ ಮತ್ತು ಬ್ರಿಟನ್ ಜನರು ತಮ್ಮ ದೇಶಗಳ ಬಹುಸಂಖ್ಯಾತರಲ್ಲದ ನಾಗರಿಕರನ್ನು ಅಪ್ಪಿಕೊಂಡು ಅವರನ್ನು ಸರ್ಕಾರದ ಉನ್ನತ ಹುದ್ದೆಗೆ ಆಯ್ಕೆ ಮಾಡಿದ್ದಾರೆ ಎಂದು ಚಿದಂಬರಂ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಭಾರತ ಮತ್ತು ಬಹುತ್ವವನ್ನು ಬೆಂಬಲಿಸುವ ಪಕ್ಷಗಳು ಇದರಿಂದ ಕಲಿಯಬೇಕಾದ ಪಾಠವಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇದು ಸಾಧ್ಯವಾಗಿದೆ ಎಂದಾದರೆ ಬ್ರಿಟಿಷರು ವಿಶ್ವದಲ್ಲಿ ಅಪರೂಪದ ಕೆಲಸ ಮಾಡಿದ್ದಾರೆ ಎಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬರನ್ನು ಅತ್ಯಂತ ಶಕ್ತಿಶಾಲಿ ಸ್ಥಾನದಲ್ಲಿ ಕೂರಿಸಲು ನಾವು ಒಪ್ಪಿಕೊಳ್ಳಬೇಕು. ನಾವು ಭಾರತೀಯರು ಸುನಕ್ ಅವರ ಗೆಲುವನ್ನು ಸಂಭ್ರಮಿಸುತ್ತೇವೆ. ಪ್ರಾಮಾಣಿಕವಾಗಿ ಕೇಳೋಣ: ಅದು ಇಲ್ಲಿಯೂ ಸಾಧ್ವಯವಾಗಬಹುದೇ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಪ್ರತಿಪಕ್ಷಗಳ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಮಾಜಿ ಕಾನೂನು ಸಚಿವ ಹಾಗೂ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾದ ನಂತರ ಕೆಲವು ನಾಯಕರು ಬಹುತ್ವದ ವಿರುದ್ಧ ವಿಪರೀತ ಆ್ಯಕ್ಟಿವ್ ಆಗಿದ್ದಾರೆ. ಎಪಿಜೆ ಅಬ್ದುಲ್ ಕಲಾಂ, ಮನಮೋಹನ್ ಸಿಂಗ್ ಅವರು 10 ವರ್ಷಗಳ ಕಾಲ ಪ್ರಧಾನಿಯಾಗಿದ್ದನ್ನು ನಾನು ಅವರಿಗೆ ನೆನಪಿಸಬಯಸುತ್ತೇನೆ. ಪ್ರತಿಷ್ಠಿತ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಈಗ ನಮ್ಮ ಅಧ್ಯಕ್ಷರಾಗಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.
ಬೇರೆ ಯಾವುದೇ ದೇಶದಿಂದ ವೈವಿಧ್ಯತೆ ಮತ್ತು ಏಕತೆಯ ಬಗ್ಗೆ ನಾವು ಕಲಿಯಬೇಕಾಗಿಲ್ಲ. ಮೆಹಬೂಬಾ ಹೇಳಿದಂತೆ ನಡೆದುಕೊಳ್ಳಲಿ. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಹುದ್ದೆಗೆ ಹಿಂದೂ ವ್ಯಕ್ತಿಯನ್ನು ಅವರು ಬೆಂಬಲಿಸಲಿ ಎಂದು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.
ಇದನ್ನೂ ಓದಿ: ಕಿಂಗ್ ಚಾರ್ಲ್ಸ್ ಭೇಟಿ ನಂತರ ಪ್ರಧಾನಿಯಾಗಿ ರಿಷಿ ಸುನಕ್ ಅಧಿಕಾರ ಸ್ವೀಕಾರ