ನವದೆಹಲಿ: ಪ್ರಬಲವಾದ ಸೌರ ಜ್ವಾಲೆಗಳು ಸೂರ್ಯನಿಂದ ಬಿಡುಗಡೆಯಾಗುತ್ತಿವೆ. ಇವುಗಳು ಉಪಗ್ರಹ ಸಂವಹನದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವ ಸಾಮರ್ಥ್ಯ ಹೊಂದಿವೆ ಎಂದು ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ. X2.2 ಮಾದರಿಯ ಸೌರಜ್ವಾಲೆಗಳ ಸ್ಫೋಟಗೊಳ್ಳುತ್ತಿದ್ದು, ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆಗೆ ಹಾನಿ ಉಂಟುಮಾಡಬಲ್ಲವು.
ಕೋಲ್ಕತ್ತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ ಅಸೋಸಿಯೇಟ್ ಪ್ರೊಫೆಸರ್ ಮತ್ತು CESSIನ ಸಂಯೋಜಕ ದಿಬ್ಯೇಂದು ನಂದಿ ಈ ಕುರಿತು ಮಾಹಿತಿ ನೀಡಿದ್ದಾರೆ. ಸೌರ ಜ್ವಾಲೆಯ ಸ್ಫೋಟ ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ಬೆಳಗ್ಗೆ 9.27 ಗಂಟೆಗೆ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕುಡಿತದ ಚಟಕ್ಕಾಗಿ ₹70 ಸಾವಿರ ಪಡೆದು ಹೆಣ್ಣು ಮಗು ಮಾರಾಟ ಮಾಡಿದ ತಂದೆ!
ಸೌರಜ್ವಾಲೆಯ ಕಾರಣ ರೇಡಿಯೋ ಸಂವಹನ, ವಿದ್ಯುತ್ ಶಕ್ತಿ ಗ್ರಿಡ್, ಬಾಹ್ಯಾಕಾಶ ನೌಕೆ ಮತ್ತು ಗಗನಯಾತ್ರಿಗಳಿಗೆ ಅಪಾಯ ಉಂಟಾಗಿದೆ ಎಂದು ಅವರು ಹೇಳುತ್ತಾರೆ. ಭಾರತ, ಆಗ್ನೇಯ ಏಷ್ಯಾ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶಗಳಲ್ಲಿ ಈ ಪ್ರಕ್ರಿಯೆಯ ಪರಿಣಾಮ ಇರಲಿದ್ದು ಉಪಗ್ರಹಗಳಲ್ಲಿ ವೈಪರಿತ್ಯ ಕಂಡು ಬರುತ್ತಿವೆ ಎಂದು ಸಿಇಎಸ್ಎಸ್ಐ ಟ್ವಿಟರ್ನಲ್ಲಿ ತಿಳಿಸಿದೆ. ಬಾಹ್ಯಾಕಾಶ ವಿಜ್ಞಾನಿಗಳು ಸೌರ ಜ್ವಾಲೆಯ ಪರಿಣಾಮದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುತ್ತಿದ್ದಾರೆ.
ಸೌರ ಜ್ವಾಲೆಗಳನ್ನು ಅವುಗಳ ಶಕ್ತಿಗನುಗುಣವಾಗಿ ವರ್ಗೀಕರಣ ಮಾಡಲಾಗ್ತಿದೆ. ಅತಿದೊಡ್ಡ ಜ್ವಾಲೆಗಳನ್ನು ಎಕ್ಸ್ ಕ್ಲಾಸ್ ಫ್ಲೇರ್ಸ್ ಎಂದು ಕರೆಯಲಾಗುತ್ತದೆ. ಚಿಕ್ಕ ಜ್ವಾಲೆಗಳನ್ನು ಎ ಕ್ಲಾಸ್ ತದನಂತರ ಬಿ,ಸಿ, ಎಂ ಮತ್ತು ಎಕ್ಸ್ ಎಂದು ವರ್ಗೀಕರಣ ಮಾಡಲಾಗಿದೆ ಎಂದು ನಾಸಾ ಹೇಳಿದೆ.