ಸುಕ್ಮಾ (ಛತ್ತೀಸ್ಗಢ): ಛತ್ತೀಸ್ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಯೋಧರು ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಸೈನಿಕರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಾರ್ಯದಿಂದ ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿದ ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ.
ಇಲ್ಲಿನ ಪೊತ್ಕಪಲ್ಲಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಗರ್ಭಿಣಿ ವೆಟ್ಟಿ ಮಾಯಾ ಎಂಬುವವರೆಗೆ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ, ಹತ್ತಿರದಲ್ಲಿ ಯಾವುದೇ ಆರೋಗ್ಯ ಕೇಂದ್ರ ಇದರ ಕಾರಣ 70 ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಸಾಗಿಸಬೇಕಿತ್ತು. ಅದುವೇ ಹತ್ತಿರದ ಆಸ್ಪತ್ರೆಯೂ ಆಗಿತ್ತು. ಆದ್ದರಿಂದ ಗ್ರಾಮಸ್ಥರು ಪೊತ್ಕಪಲ್ಲಿ ಶಿಬಿರದಲ್ಲಿದ್ದ ಯೋಧರ ನೆರವು ಕೋರಿದ್ದರು.
ಅಂತೆಯೇ ನೆರವಿಗೆ ಧಾವಿಸಿದ ಯೋಧರು ವೈದ್ಯಕೀಯ ತಂಡದೊಂದಿಗೆ ಗರ್ಭಿಣಿಗೆ ಮನೆಗೆ ತಲುಪಿದರು. ಹೆರಿಗೆಯಿಂದ ಬಳಲುತ್ತಿದ್ದ ಮಹಿಳೆಯ ಮನೆಯಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಸಲೈನ್ಅನ್ನು ಹಚ್ಚಿದರು. ಆದರೆ, ಗ್ರಾಮದಲ್ಲಿ ರಸ್ತೆ ಇಲ್ಲದ ಕಾರಣಕ್ಕೆ ವಾಹನ ಬರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಯೋಧರೇ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಮುಖ್ಯ ರಸ್ತೆಯವರೆಗೆ ಹೊತ್ತುಕೊಂಡು ಸಾಗಿದರು. ಅಲ್ಲದೇ, ಸಲೈನ್ಅನ್ನು ಸೈನಿಕರೇ ಹಿಡಿದುಕೊಂಡು ವಾಹನದವರೆಗೆ ತಲುಪಿದರು.
ನಂತರ ಗರ್ಭಿಣಿಯನ್ನು 70 ಕಿಮೀ ದೂರದ ಭದ್ರಾಚಲಂ ಆಸ್ಪತ್ರೆಗೆ ವಾಹನದಲ್ಲಿ ಯೋಧರು ಕಳುಹಿಸಿದರು. ಇದರಿಂದ ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಾದ ಗರ್ಭಿಣಿ ಅಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಸಂಕಷ್ಟದಲ್ಲಿ ನೆರವಾದ ಕೋಬ್ರಾ ಪಡೆ, ಎಸ್‌ಟಿಎಫ್, ಸಿಆರ್‌ಪಿಎಫ್‌ನ ಯೋಧರಿಗೆ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರು ಧನ್ಯವಾದ ಸಲ್ಲಿಸಿದ್ದಾರೆ.
ಪೊತ್ಕಪಲ್ಲಿ ಗ್ರಾಮದಲ್ಲಿ ಒಂದು ಕಾಲದಲ್ಲಿ ನಕ್ಸಲೀಯರ ಹಾವಳಿ ಹೆಚ್ಚಾಗಿತ್ತು. ಇದರಿಂದ ಆಸ್ಪತ್ರೆ, ರಸ್ತೆ ಸೇರಿದಂತೆ ಮೂಲ ಸೌಕರ್ಯದಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ. ಅದರಲ್ಲೂ ಗ್ರಾಮಸ್ಥರು ಆರೋಗ್ಯ ಸಂಬಂಧಿ ಸೌಲಭ್ಯಗಳಿಗಾಗಿ ಅಲೆದಾಡಬೇಕಾಗಿದೆ. ರೋಗಿಗಳನ್ನು ಮಂಚದಲ್ಲಿ ಎತ್ತಿಕೊಂಡು ಕಿಲೋಮೀಟರ್‌ಗಳಷ್ಟು ಕಾಲ್ನಡಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಬೇಕಾದ ಪರಿಸ್ಥಿತಿ ಇದೆ.
ಈ ಪೈಕಿ ಕೆಲವು ರೋಗಿಗಳು ಸುರಕ್ಷಿತವಾಗಿ ಆಸ್ಪತ್ರೆ ತಲುಪುತ್ತಾರೆ. ಕೆಲವರು ಗಂಭೀರ ಸ್ಥಿತಿಯಲ್ಲಿ ಮೃತಪಟ್ಟ ಘಟನೆಗಳು ನಡೆದಿವೆ. ಆದರೆ, ಕಳೆದ ಒಂದು ವರ್ಷದಿಂದ ಗ್ರಾಮದಲ್ಲಿ ಭದ್ರತಾ ಪಡೆಗಳ ಶಿಬಿರವನ್ನು ಸ್ಥಾಪಿಸಲಾಗಿದೆ. ಕಠಿಣ ಪರಿಸ್ಥಿತಿಯಲ್ಲಿಯೋಧರು ಗ್ರಾಮಸ್ಥರ ನೆರವಿಗೆ ಧಾವಿಸುತ್ತಿದ್ದಾರೆ.
ಇದನ್ನೂ ಓದಿ: ಪತ್ನಿ ಕೊಂದ ಗಂಡ ಕೆಲವೇ ಗಂಟೆಗಳಲ್ಲೇ ಹೃದಯಾಘಾತದಿಂದ ಸಾವು