ನವದೆಹಲಿ: ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದರು. ಇದು ರಾಷ್ಟ್ರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ಹೊಸದಾಗಿ ನೇಮಕಗೊಂಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಸುಬ್ರಮಣಿಯನ್ ಸ್ವಾಮಿ ಅವರನ್ನು ಕೈಬಿಡಲಾಗಿದೆ. ಇದರ ಬೆನ್ನಲ್ಲೇ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ದೆಹಲಿ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ ಅವರೊಂದಿಗೆ ತೃಣಮೂಲ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರ ಅಧಿಕೃತ ನಿವಾಸದಲ್ಲಿ ಉಭಯ ನಾಯಕರು ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸ್ವಾಮಿ, 'ನಾನು ಈಗಾಗಲೇ ಮಮತಾ ಜೊತೆಯಲ್ಲಿದ್ದೇನೆ. ಇದರ ಹೊರತಾಗಿ ಪಕ್ಷ ಸೇರುವ ಅಗತ್ಯವಿಲ್ಲ' ಎಂದರು.
ಕಳೆದೆರಡು ದಿನಗಳ ಹಿಂದೆ ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದ ಸುಬ್ರಮಣಿಯನ್ ಸ್ವಾಮಿ, ರಾಜ್ಯಪಾಲ ಜಗದೀಪ್ ಧಂಖರ್ ಅವರನ್ನು ಭೇಟಿ ಮಾಡಿದ್ದರು.
ಇದನ್ನೂ ಓದಿ: ಹಳ್ಳಿಗಳ ರಸ್ತೆಗಳು ಕತ್ರಿಕಾ ಕೈಫ್ ಕೆನ್ನೆಯಿಂತರಬೇಕು.. ರಾಜಸ್ಥಾನದ ಸಚಿವರ ವಿವಾದಾತ್ಮಕ ಹೇಳಿಕೆ
ಅಕ್ಟೋಬರ್ ತಿಂಗಳಲ್ಲಿ ಇಟಲಿಯ ರೋಮ್ನಲ್ಲಿ ಆಯೋಜನೆಗೊಂಡಿದ್ದ ಜಾಗತಿಕ ಶಾಂತಿ ಸಮ್ಮೇಳನದಲ್ಲಿ ಭಾಗಿಯಾಗಲು ಮಮತಾ ಬ್ಯಾನರ್ಜಿಗೆ ಕೇಂದ್ರ ಸರ್ಕಾರ ಅವಕಾಶ ನಿರಾಕರಿಸಿತ್ತು. ಈ ವಿಚಾರದ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ಜೊತೆಗೆ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ವೇಳೆ ನಂದಿಗ್ರಾಮ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದ ಮಮತಾ, ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಶುಭ ಕೋರಿದ್ದರು.
ಪ್ರಧಾನಿ ಭೇಟಿ ಮಾಡಲಿರುವ ಮಮತಾ
ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿರುವ ಮಮತಾ ಬ್ಯಾನರ್ಜಿ, ರಾಜ್ಯದ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲಿನ ಹಲ್ಲೆ ಬಗ್ಗೆಯೂ ಸಮಾಲೋಚನೆ ನಡೆಸಲಿದ್ದಾರೆಂದು ತಿಳಿದು ಬಂದಿದೆ.