ಕೊಟ್ಟಾಯಂ (ಕೇರಳ): ಜೂಜಾಟದ ತಂಡವನ್ನು ಹಿಡಿಯಲು ಯತ್ನಿಸುತ್ತಿದ್ದ ವೇಳೆ ಕಟ್ಟಡದ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಕರ್ತವ್ಯನಿರತ ಪೊಲೀಸ್ ಸಬ್ ಇನ್ಸ್ಪೆಕ್ಟರ್ವೊಬ್ಬರು ಮೃತಪಟ್ಟಿರುವ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. ಪೊಂಕುನ್ನಂ ಚಿರಕ್ಕಡವು ಮೂಲದ ಜೋಬಿ ಜಾರ್ಜ್ ಮೃತ ಎಸ್‌ಐ.
ರಾಮಪುರಂ ಪೊಲೀಸ್ ಠಾಣೆಯ ಗ್ರೇಡ್ ಎಸ್‌ಐ ಆಗಿದ್ದ ಜೋಬಿ ಜಾರ್ಜ್ ಶನಿವಾರ ರಾತ್ರಿ ರಾತ್ರಿ ಗಸ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿ ಕಟ್ಟಡದಲ್ಲಿ ವಲಸೆ ಕಾರ್ಮಿಕರು ವಾಸವಾಗಿದ್ದರು. ಈ ಕಾರ್ಮಿಕರು ಇಸ್ಪೀಟು ಆಡುವ ಮೂಲಕ ಗಲಾಟೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅಂತೆಯೇ, ಎಸ್‌ಐ ಜೋಬಿ ಜಾರ್ಜ್ ಮತ್ತು ಸಿಪಿಒ ವಿನೀತ್ ರಾಜ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಕಟ್ಟಡದ ಎರಡನೇ ಮಹಡಿಗೆ ಹೋಗಿ ಎಸ್‌ಐ ಜಾರ್ಜ್ ಪರಿಶೀಲನೆ ಮಾಡುತ್ತಿದ್ದರು. ಆದರೆ, ಈ ವೇಳೆ ಒಳಗೆ ಇದ್ದವರು ತಕ್ಷಣಕ್ಕೆ ಬಾಗಿಲು ತೆರೆದಿಲ್ಲ. ಇದರಿಂದ ಬಾಗಿಲನ್ನು ತಳ್ಳುವ ಯತ್ನದಲ್ಲಿ ಹಿಂದಕ್ಕೆ ವಾಲಿ ಕಟ್ಟಡದಿಂದ ಕೆಳಗಡೆ ಬಿದ್ದಿದ್ದಾರೆ. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಾಲಾ ಮಾರ್ ಸ್ಲೀವಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಡರಾತ್ರಿ 2 ಗಂಟೆಗೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಸದೇ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಗುಂಡಿನ ಚಕಮಕಿ: ಮತ್ತೊಂದೆಡೆ, ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಬಹದರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಪೊಲೀಸರು ಮತ್ತು ಗೋ ಕಳ್ಳಸಾಗಣೆದಾರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಒಬ್ಬ ದುಷ್ಕರ್ಮಿಯ ಕಾಲಿಗೆ ಗುಂಡು ಹಾರಿಸಲಾಗಿದೆ. ಅಲ್ಲದೇ, ರೂರ್ಕಿ ಎಸ್‌ಒಜಿಯ ಕಾನ್‌ಸ್ಟೇಬಲ್ ಸಹ ಗಾಯಗೊಂಡಿದ್ದಾರೆ. ಗಾಯಾಳು ರೂರ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲ ಗೋ ಕಳ್ಳಸಾಗಣೆದಾರರು ಸಹರಾನ್‌ಪುರಕ್ಕೆ ಬರುತ್ತಿರುವ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಅಂತೆಯೇ, ಬಹದರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಬಧೇಡಿ ರಜಪೂತಾನ ಮತ್ತು ಕೋರ್ ಕಾಲೇಜು ನಡುವೆ ಕಳ್ಳಸಾಗಣೆದಾರರ ತಂಡ ಪತ್ತೆಯಾಗಿದೆ. ಬಹದರಾಬಾದ್ ಪೊಲೀಸ್ ಠಾಣೆಯ ಮುಖ್ಯಸ್ಥ ನಿತೇಶ್ ಶರ್ಮಾ ಮತ್ತು ಎಸ್‌ಒಜಿ ರೂರ್ಕಿ ಉಸ್ತುವಾರಿ ಮನೋಹರ್ ಭಂಡಾರಿ ತಮ್ಮ ತಂಡಗಳೊಂದಿಗೆ ದುಷ್ಕರ್ಮಿಗಳನ್ನು ಸುತ್ತುವರೆದು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಕಳ್ಳಸಾಗಣೆದಾರರು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾರೆ.
ಇದರಿಂದ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದು, ಓರ್ವ ದುಷ್ಕರ್ಮಿ ಮೊಣಕಾಲಿನ ಕೆಳಗಿನ ಕಾಲಿಗೆ ಗುಂಡು ತಾಗಿದೆ. ಇದರಿಂದ ಆತನನ್ನು ಪೊಲೀಸರು ಹಿಡಿದಿದ್ದಾರೆ. ಇದೇ ವೇಳೆ ಇತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದೆ. ತಲೆಮರೆಸಿಕೊಂಡಿರುವ ಈ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಸದ್ಯ ಬಂಧಿತನನ್ನು ವಿಚಾರಣೆಗೊಳಪಡಿಸಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೀಗ ಹಾಕಿದ್ದ ಮನೆಯಲ್ಲಿ ವಿಧವೆ, ಇಬ್ಬರು ಮಕ್ಕಳ ಮೃತದೇಹಗಳು ಪತ್ತೆ