ಆಗ್ರಾ(ಉತ್ತರ ಪ್ರದೇಶ): ವಿಶ್ವವಿಖ್ಯಾತ ತಾಜ್ ಮಹಲ್ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಅದ್ಭುತ ವಾಸ್ತುಶಿಲ್ಪದ, ಬಿಳಿ ಬಣ್ಣದ ಅಮೃತ ಶಿಲೆಯ ಭವ್ಯ ಸ್ಮಾರಕದಲ್ಲಿ ಇತ್ತೀಚಿನ ದಿನಗಳಲ್ಲಿ ಹಸಿರ ಕಲೆಗಳು ಕಾಣುತ್ತಿವೆ. ಶುಚಿಗೊಳಿಸಿದಂತೆ ಪ್ರತಿ ವರ್ಷವೂ ಕಾಡುತ್ತಿರುವ ಈ ಕಲೆಗಳು ಮೂಡಲು ಕಾರಣ ಯಮುನಾ ನದಿ ತೀರದಲ್ಲಿರುವ ಕೀಟಗಳು. ಈ ಕೀಟಗಳ ಮಲದಿಂದ ಇಂಥ ಕಲೆಗಳು ಉಂಟಾಗುತ್ತಿದ್ದು, ಆಳ ಅಧ್ಯಯನಕ್ಕೆ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಮುಂದಾಗಿದೆ.
2015ರಲ್ಲಿ ಮೊದಲ ಬಾರಿಗೆ ತಾಜ್ ಮಹಲ್ ಮೇಲೆ ಕಂದು-ಹಸಿರು ಬಣ್ಣದ ಕಲೆಗಳು ಕಂಡುಬಂದಿತ್ತು. ಇದಕ್ಕೆ ಕಾರಣ ಗೋಲ್ಡಿ ಚಿರೊನೊಮಸ್ ಎಂಬ ಸಣ್ಣ ಕೀಟಗಳು. ಆದರೆ, ಈ ವಾದವನ್ನು ಕೆಲವರು ತಳ್ಳಿ ಹಾಕಿದ್ದಾರೆ. ಒಂದೊಮ್ಮೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಈ ಕಲೆಯನ್ನು ಮಡ್ ಪ್ಯಾಕ್ನೊಂದಿಗೆ ಮುಚ್ಚಿದ್ದಾರೆ. ಆದರೆ, ಇದಾದ ಎರಡು ವರ್ಷಕ್ಕೆ ಮತ್ತೆ ಕಲೆ ಕಾಣಿಸಿಕೊಳ್ಳುತ್ತಿದೆ. 2020ರಲ್ಲಿ ಕೋವಿಡ್ ಲಾಕ್ಡೌನ್ನಿಂದಾಗಿ ಆಗ್ರಾದಲ್ಲಿ ಮಾಲಿನ್ಯಮಟ್ಟ ಕಡಿಮೆ ಇದ್ದಾಗಲೂ ಇದು ಕಾಣಿಸಿಕೊಂಡಿದೆ.
ಈ ಕುರಿತು ಮಾತನಾಡಿರುವ ಎಎಸ್ಐನ ಪುರಾತತ್ವ ತಜ್ಞ ರಾಜ್ಕುಮಾರ್ ಪಟೇಲ್, "ಯಮುನಾ ನದಿ ತೀರದಲ್ಲಿರುವ ಸ್ಮಾರಕದಲ್ಲಿ ಕಂದು-ಹಸಿರುವ ಬಣ್ಣದ ಕಲೆ ಕಾಣಿಸುತ್ತಿದೆ. ಎಎಸ್‌ಐ ರಾಸಾಯನಿಕ ವಿಭಾಗ, ಕೀಟಗಳ ಮಲಗಳಿಂದ ಆಗುತ್ತಿರುವ ಈ ಕಲೆಯನ್ನು ಡಿಸ್ಟಿಲ್ಡ್ ವಾಟರ್ ಮೂಲಕ ಸ್ವಚ್ಛ ಮಾಡಿದ್ದಾರೆ. ಆದಾಗ್ಯೂ ಪ್ರತಿವರ್ಷ ಈ ಕಲೆ ಕಾಣಿಸುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ".
"ಯಮುನಾ ನದಿಯಲ್ಲಿ ಮಾರ್ಚ್-ಏಪ್ರಿಲ್ ಮತ್ತು ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ತಾಪಮಾನ 28-35 ಡಿಗ್ರಿ ಇದ್ದು, ಈ ಸಂದರ್ಭದಲ್ಲಿ ಈ ಕೀಟಗಳು ಕಾಣಿಸಿಕೊಳ್ಳುತ್ತವೆ. ಈ ಕಲೆಗಳು ನವೆಂಬರ್ ಬಳಿಕ ಹೆಚ್ಚು. ಕೀಟಗಳ ಸಂತಾನೋತ್ಪತ್ತಿ ಜಾಸ್ತಿಯಾದಂತೆ ಕಲೆಗಳೂ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಕೀಟಗಳ ಸಂತಾನೋತ್ಪತ್ತಿ ಚಕ್ರ ಅರ್ಥ ಮಾಡಿಕೊಳ್ಳುವಿಕೆ ಮತ್ತು ಪ್ರಸರಣ ಪರಿಸ್ಥಿತಿ ಹಾಗು ತಾಜ್ ಮಹಲ್ಗೆ ಇದು ಹಾನಿಯಾಗದಂತೆ ತಡೆಯುವ ಮಾದರಿಗಳ ಕುರಿತು ಆಳವಾದ ಅಧ್ಯಯನಕ್ಕೆ ಎಎಸ್ಐನ ಕೆಮಿಕಲ್ ವಿಭಾಗ ಮುಂದಾಗಿದೆ" ಎಂದು ಪಟೇಲ್ ತಿಳಿಸಿದರು.
ಈ ನಡುವೆ ಆಗ್ರಾ ಟೂರಿಸ್ಟ್ ವೆಲ್ಫೇರ್ ಚೇಂಬರ್ ಕೂಡ ತಾಜ್ ಬ್ಯಾರೇಜ್ ನಿರ್ಮಾಣ ಯೋಜನೆಯಿಂದ ವಾಯು ಮಾಲಿನ್ಯ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಧ್ವನಿ ಎತ್ತಿದೆ. ಅಲ್ಲದೇ ಈ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಆಗ್ರಹಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಗಂಡ - ಹೆಂಡತಿ ಕಾಳಗದಿಂದ ವಿಮಾನದ ಮಾರ್ಗ ಬದಲು, ತುರ್ತು ಭೂಸ್ಪರ್ಶ!