ಪಾಟ್ನಾ(ಬಿಹಾರ): ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರದ ಬೆಟ್ಟಿಯಾ ಜಿಲ್ಲೆಯಲ್ಲಿ ಪ್ರತಿಭಟನೆ ವೇಳೆ ನಡೆದ ಭಾರಿ ಹಿಂಸಾಚಾರದ ನಂತರ ರಾಜ್ಯ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ವಾಟ್ಸ್ಆ್ಯಪ್ ಗುಂಪಿನ ಮೂಲಕ ವಿದ್ಯಾರ್ಥಿಗಳನ್ನು ಪ್ರಚೋದಿಸಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಪೆಟ್ರೋಲ್ ಬೆಲೆ 108 ರೂಪಾಯಿ ಆಗಿದೆ. ಪ್ರತಿನಿತ್ಯ ಅಗತ್ಯ ವಸ್ತುಗಳ ದರ ಏರಿಕೆಯಾಗುತ್ತಿದೆ. ಸರ್ಕಾರ ಮತ್ತು ಬಿಜೆಪಿ ನಾಯಕರ ಆಸ್ತಿಗಳಿಗೆ ಬೆಂಕಿ ಹಚ್ಚಿದಾಗ ಮಾತ್ರ ನಮ್ಮ ಆಂದೋಲನ ಯಶಸ್ವಿಯಾಗುತ್ತದೆ ಎಂದು ವಾಟ್ಸ್ಆ್ಯಪ್ ಮೂಲಕ ಸಂಭಾಷಣೆ ನಡೆಸಲಾಗಿದೆ.
ಕಳೆದ ಜೂನ್ 17ರಂದು ಬಿಹಾರದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತು. ಉಪ ಮುಖ್ಯಮಂತ್ರಿ ರೇಣು ದೇವಿ ಮನೆ ಮೇಲೆ ಹಾಗೂ ರೈಲ್ವೆ ನಿಲ್ದಾಣಗಳಿಗೆ ನುಗ್ಗಿದ ಉದ್ರಿಕ್ತರ ಗುಂಪು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದ್ದರು.
ಪಾಟ್ನಾ, ಜೆಹಾನಾಬಾದ್, ಭೋಜ್‌ಪುರ, ಪಶ್ಚಿಮ ಚಂಪಾರಣ್, ಬಕ್ಸರ್, ರೋಹ್ತಾಸ್, ಕೈಮೂರ್, ನವಾಡ, ಮಾಧೇಪುರ, ಮುಜಾಫರ್‌ಪುರ, ಸುಪೌಲ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಲವಾರು ರೈಲುಗಳಿಗೆ ಬೆಂಕಿ ಹಚ್ಚಿದ್ದರು. ಈ ಹಿಂಸಾಚಾರದ ಪೂರ್ವ ಸಿದ್ಧತೆಗಾಗಿ "ಫ್ಯೂಚರ್ ಫೌಜಿ" ಎಂಬ ವಾಟ್ಸ್ಆ್ಯಪ್ ಗ್ರೂಪ್ ಕೆಲವು ಪ್ರಚೋದನಕಾರಿ ಸಂದೇಶಗಳನ್ನು ಅಪ್ಲೋಡ್ ಮಾಡಿದೆ ಎಂದು ಚಂಪಾರಣ್ ಜಿಲ್ಲೆಯ ಪಶ್ಚಿಮ ವಿಭಾಗದ ಪೊಲೀಸ್ ಅಧೀಕ್ಷಕ ಉಪೇಂದ್ರ ನಾಥ್ ವರ್ಮಾ ತಿಳಿಸಿದ್ದಾರೆ.
ಬಿಹಾರದಲ್ಲಿ ವಾಟ್ಸ್ಆ್ಯಪ್ ಗ್ರೂಪ್‌ಗಳ ಮೂಲಕ ವದಂತಿಗಳನ್ನ ಹರಡಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ನಾವು ಕೆಲವು ಆರೋಪಿಗಳನ್ನು ಬಂಧಿಸಿದ್ದೇವೆ ಮತ್ತು ಬೆಂಕಿ ಹಚ್ಚುವಲ್ಲಿ ತೊಡಗಿರುವ ಹಲವರನ್ನು ಗುರುತಿಸಿದ್ದೇವೆ ಎಂದು ಉಪೇಂದ್ರ ನಾಥ್ ವರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಅಗ್ನಿಪಥ್ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಆರೋಪ.. 35 ವಾಟ್ಸಾಪ್ ಗ್ರೂಪ್ ನಿಷೇಧ