ಆಗ್ರಾ (ಉತ್ತರ ಪ್ರದೇಶ): ಪಾಕಿಸ್ತಾನ ವಿರುದ್ಧದ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಸೋತ ನಂತರ ಸಂಭ್ರಮಾಚರಣೆ ಮಾಡಿದ ಆರೋಪದಡಿ ಬಂಧಿತರಾಗಿರುವ ಆಗ್ರಾದ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳ ಮೇಲಿನ ದೇಶದ್ರೋಹದ ಆರೋಪಗಳನ್ನು ಹಿಂಪಡೆಯಲು ಮಧ್ಯಪ್ರವೇಶಿಸುವಂತೆ ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಸಂಘವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರದಂದು ಪತ್ರ ಬರೆದಿದೆ.
ಮಾನವೀಯ ನೆಲೆಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಮತ್ತು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸಂಘವು ಮೋದಿಯವರಿಗೆ ಪತ್ರದಲ್ಲಿ ಮನವಿ ಮಾಡಿದೆ.
ಮನವಿ:
ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ವಕ್ತಾರ ನಾಸಿರ್ ಖುಹಮಿ, ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧದ ಕ್ರಮವು ಸಂಪೂರ್ಣವಾಗಿ ಅನಪೇಕ್ಷಿತವಾಗಿದೆ. ಇದು ಆಕ್ರಮ ಆಗಿರಬಹುದು, ಆದರೆ ಇದು ಯಾವುದೇ ರೀತಿಯಲ್ಲಿ ಕಾನೂನುಬಾಹಿರವಲ್ಲ. ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸುವುದರಿಂದ ಅವರ ಮುಂದಿನ ವೃತ್ತಿ ಜೀವನ ಹಾಳಾಗುತ್ತದೆ. ಕಠಿಣವಾಗಿ ಪ್ರತಿಕ್ರಿಯಿಸುವ ಬದಲು ಅವರಿಗೆ ಸಲಹೆ ನೀಡಬೇಕಾಗಿದೆ ಎಂದರು. ವಿದ್ಯಾರ್ಥಿಗಳ ಮೇಲಿನ ದೇಶದ್ರೋಹದ ಆರೋಪಗಳನ್ನು ಹಿಂಪಡೆಯಲು ಮೋದಿಯವರ ಮಧ್ಯಸ್ಥಿಕೆಯನ್ನು ಕೋರಿದ ಅವರು, ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಮರಳಲು ಅವಕಾಶವನ್ನು ನೀಡಬಹುದು ಎಂದು ಸಂಘವು ಭಾವಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಪರಾಭವ ಬಳಿಕ ಸಂಭ್ರಮ: ಸ್ಕಾಲರ್ಶಿಪ್ ಪಡೆಯುತ್ತಿದ್ದ ಮೂವರು ವಿದ್ಯಾರ್ಥಿಗಳು ಅಮಾನತು
ಇನ್ನೂ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯೂನುಸ್ ರಶೀದ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂದಿದ್ದಾರೆ.
ಪ್ರಕರಣ:
ಅಕ್ಟೋಬರ್ 24ರಂದು ಪಾಕಿಸ್ತಾನ ವಿರುದ್ಧದ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಸೋತ ನಂತರ ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರವಾಗಿ ಸ್ಟೇಟಸ್ ಹಾಕಿಕೊಂಡು, ಅಶಿಸ್ತು ಪ್ರದರ್ಶಿಸಿದ್ದರು. ಬಿಜೆಪಿ ಯುವ ಮುಖಂಡ ಗೌರವ್ ರಾಜಾವತ್ ನೀಡಿದ ದೂರಿನ ಆಧಾರದ ಮೇಲೆ ಮೂವರನ್ನು ಬಂಧಿಸಲಾಗಿದೆ. ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಮಾಡುತ್ತಿದ್ದ ಮೂವರೂ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಹಾಗೂ ಸಂಸ್ಥೆಯಿಂದ ಕಾಲೇಜು ಆಡಳಿತ ಮಂಡಳಿ ಅಮಾನತುಗೊಳಿಸಿದೆ.