ಗೊಂಡಾ(ಉತ್ತರಪ್ರದೇಶ): ಇಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಮೇಲೆ ಯುವಕರ ಗುಂಪೊಂದು ಅಮಾನುಷವಾಗಿ ದಾಳಿ ಮಾಡಿದ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ದೇಹದಲ್ಲಿ ರಕ್ತ ಸುರಿಯುತ್ತಿದ್ದರೂ ಬಿಡದ ಗುಂಪು ಕ್ರೂರವಾಗಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗೊಂಡಾ ಜಿಲ್ಲೆಯ ಮಂಕಾಪುರ ಕೊತ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೇಂದ್ರಿಯ ವಿವಿ ವಿದ್ಯಾರ್ಥಿಯೊಬ್ಬನ ಬಟ್ಟೆ ಬಿಚ್ಚಿಸಿ ಅರೆ ನಗ್ನವಾಗಿ ಮಾಡಿದ ಗುಂಪು ಕಟ್ಟಿಗೆ, ದೊಣ್ಣೆ, ಬೂಟು, ಚಪ್ಪಲಿಗಳಿಂದ ತೀವ್ರವಾಗಿ ಹಲ್ಲೆ ಮಾಡಿದೆ. ಇದರಿಂದ ಯುವಕನ ದೇಹದಲ್ಲಿ ರಕ್ತಸ್ರಾವವಾಗಿದೆ. ಆದರೂ ಬಿಡದ ಗುಂಪಿನ 5- 6 ಜನರು ಸೇರಿ ವಿದ್ಯಾರ್ಥಿಯನ್ನು ಕ್ರೂರವಾಗಿ ಥಳಿಸಿದ್ದಾರೆ. ವಿದ್ಯಾರ್ಥಿ ಮಾತ್ರ ತನ್ನನ್ನು ಬಿಟ್ಟು ಬಿಡುವಂತೆ ಗೋಗರೆಯುತ್ತಿರುವುದು ವಿಡಿಯೋದಲ್ಲಿದೆ.
ಜೊತೆಗೆ ಕಾಲೇಜಿನಿಂದ ತನ್ನನ್ನು ಹೊರ ಹಾಕಿ, ನನ್ನನ್ನು ಬಿಟ್ಟುಬಿಡಿ ಎಂದು ಯುವಕ ಕೈ ಮುಗಿದು ಬೇಡಿಕೊಂಡಿದ್ದಾನೆ. ಉನ್ಮಾದದಲ್ಲಿದ್ದ ಗುಂಪು ಯುವಕನ ಬಟ್ಟೆಯನ್ನು ಪೂರ್ಣವಾಗಿ ಬಿಚ್ಚಿಸಿ ಬೆತ್ತಲು ಮಾಡಿ ಮತ್ತೆ ಥಳಿಸಿದೆ. ಹಲ್ಲೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಪೊಲೀಸರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಆಕಾಶ್ ಕುಮಾರ್ ತಿಳಿಸಿದರು.
ಓದಿ: ಪೊಲೀಸರು ಮತ್ತು ಗ್ಯಾಂಗ್ಸ್ಟರ್ ನಡುವೆ ಗುಂಡಿನ ಚಕಮಕಿ: ಇಬ್ಬರ ಬಂಧನ