ನವದೆಹಲಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಉಸ್ತುವಾರಿ ಜವಾಬ್ದಾರಿ ಹೊತ್ತುಕೊಂಡಿರುವ ಹೆಚ್ ಕೆ ಪಾಟೀಲ್ ಪಕ್ಷದ ಹೈಕಮಾಂಡ್ ಸೋನಿಯಾ ಗಾಂಧಿ ಅವರನ್ನ ಭೇಟಿಯಾಗಿದ್ದು, ಈ ವೇಳೆ ರಾಜ್ಯದಲ್ಲಿ ಪಕ್ಷವನ್ನ ಮತ್ತಷ್ಟು ಬಲಪಡಿಸಲು ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಅಭಿವೃದ್ಧಿ ಪರ ಯೋಜನೆಗಳಿಗೆ ಸರ್ಕಾರದಿಂದ ಸರಿಯಾದ ರೀತಿಯಲ್ಲಿ ಹಣ ಸಿಗುತ್ತಿಲ್ಲ ಎಂಬ ವಿಷಯವನ್ನ ಹೈಕಮಾಂಡ್ ಎದುರು ಹಂಚಿಕೊಂಡಿದ್ದಾರೆಂದು 'ಈಟಿವಿ ಭಾರತ' ಪ್ರತಿನಿಧಿ ಅಮಿತ್ ಅಗ್ನಿಹೋತ್ರಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ಪಕ್ಷದ ಅಧ್ಯಕ್ಷೆಯನ್ನು ಹೆಚ್ ಕೆ ಪಾಟೀಲ್ ಭೇಟಿಯಾಗಿದ್ದರು. ಈ ವೇಳೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬಲಪಡಿಸುವ ಜೊತೆಗೆ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರ ಮುಂದುವರೆಸುವಂತೆ ಸೂಚನೆ ನೀಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಮುಂದಾಗುವಂತೆ ಸೂಚನೆ ನೀಡಿದ್ದಾರೆಂದು ಮಹಾರಾಷ್ಟ್ರದ ಎಐಸಿಸಿ ಉಸ್ತುವಾರಿ ಹೆಚ್ ಕೆ ಪಾಟೀಲ್ 'ಈಟಿವಿ ಭಾರತ'ಗೆ ತಿಳಿಸಿದ್ದಾರೆ.
2019ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿವೆ. ಆದರೆ, ಕಾಂಗ್ರೆಸ್ ಶಾಸಕರು ಆಯ್ಕೆಯಾಗಿರುವ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಚಾರವಾಗಿ ಇತ್ತೀಚೆಗಷ್ಟೇ ಕಾಂಗ್ರೆಸ್ ಮಹತ್ವದ ಚರ್ಚೆ ನಡೆಸಿತು. ಜೊತೆಗೆ ರಾಜ್ಯದ ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್, ಲೋಕೋಪಯೋಗಿ ಇಲಾಖೆ ಸಚಿವ ಅಶೋಕ್ ಚವ್ಹಾಣ್ ಮತ್ತು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಪಟೋಲೆ ನೆತೃತ್ವದ ನಿಯೋಗ ಸಿಎಂ ಉದ್ಧವ್ ಠಾಕ್ರೆ ಅವರನ್ನ ಭೇಟಿ ಮಾಡಿತ್ತು. ಇದಾದ ಬಳಿಕ ಏಪ್ರಿಲ್ 5ರಂದು 22 ಶಾಸಕರ ನಿಯೋಗವೊಂದು ಸೋನಿಯಾ ಗಾಂಧಿ ಅವರ ಮುಂದೆ ಈ ವಿಚಾರವಾಗಿ ಆರೋಪ ಸಹ ಮಾಡಿತ್ತು.
ಇದನ್ನೂ ಓದಿ: ಜಮೀನು ವಿವಾದ: ಗುಂಡು ಹಾರಿಸಿದ ತಂದೆ-ಮಗ.. ಮಹಿಳೆ ಸ್ಥಿತಿ ಗಂಭೀರ
ಆರೋಪ ತಳ್ಳಿಹಾಕಿದ ಪಾಟೀಲ್: ಆಡಳಿತರೂಢ ಮೈತ್ರಿ ಜೊತೆಗಿನ ಪಕ್ಷದ ಬಿರುಕು ತಳ್ಳಿಹಾಕಿರುವ ಹೆಚ್ ಕೆ ಪಾಟೀಲ್, ಎಲ್ಲ ಪಕ್ಷಗಳು ಮೈತ್ರಿಗೆ ಬದ್ಧವಾಗಿವೆ. ಮಾತುಕತೆಯ ಕೊರತೆಯಿಂದಾಗಿ ಕೆಲವೊಮ್ಮೆ ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಂಡಿರಬಹುದು. ಆದರೆ, ಮುಖ್ಯಮಂತ್ರಿಗಳು ಅದನ್ನ ನೋಡಿಕೊಳ್ಳುತ್ತಾರೆ. ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿರುವ ಮೈತ್ರಿ ಸರ್ಕಾರ ಒಟ್ಟಾಗಿ ಹೇಗೆ ಕೆಲಸ ಮಾಡ್ತಿದೆ ಎಂಬುದಕ್ಕೆ ಕಳೆದ ಕೆಲ ದಿನಗಳ ಹಿಂದೆ ಕೊಲ್ಲಾಪುರದಲ್ಲಿ ನಡೆದ ವಿಧಾನಸಭೆ ಉಪಾಚುನಾವಣೆ ಉತ್ತಮ ಉದಾಹರಣೆ ಎಂದರು.
ಇದೇ ವೇಳೆ ಮಾತು ಮುಂದುವರೆಸಿದ ಅವರು, ರಾಜಕೀಯದಲ್ಲಿ ನಡೆಯುತ್ತಿರುವ ಕೋಮುವಾದದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಬಿಜೆಪಿ ಮತ್ತು ಎಂಎನ್ಎಸ್ ಒಟ್ಟಾಗಿ ಕೆಲಸ ಮಾಡುವ ಮೂಲಕ ಇಂತಹ ವಾತಾವರಣ ಸೃಷ್ಟಿ ಮಾಡ್ತಿವೆ ಎಂಬ ಆರೋಪ ಮಾಡಿದರು. ರಾಜಕೀಯ ಉದ್ದೇಶಕ್ಕಾಗಿ ಧರ್ಮ ಬಳಕೆ ಸರಿಯಲ್ಲ. ಇದರಿಂದ ಅನೇಕ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.