ಜಾಂಜಗೀರ್ ಚಂಪಾ (ಛತ್ತೀಸ್ಗಢ): ಛತ್ತೀಸ್ಗಢದ ಜಾಂಜಗೀರ್ ಚಂಪಾ ಜಿಲ್ಲೆಯ ಗ್ರಾಮವೊಂದರಲ್ಲಿ ವಿಚಿತ್ರ ಘಟನೆ ನಡೆದಿದೆ. ನೆಲದಿಂದ ನೀರು ಮತ್ತು ಅನಿಲ ತನ್ನಷ್ಟಕ್ಕೇ ತಾನೇ ಚಿಮ್ಮುತ್ತಿದೆ. ಇದನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ.
ಇಲ್ಲಿನ ಪಿಹ್ರಿದ್ ಗ್ರಾಮದಲ್ಲಿ ರೈತರೊಬ್ಬರು ತಮ್ಮ ಎಂದಿನಂತೆ ಹೊಲಕ್ಕೆ ನೀರು ಹಾಯಿಸಿದ್ದಾರೆ. ಆದರೆ, ನಂತರ ಹೊಲದಲ್ಲಿ ನೀರಿನ ಬುಗ್ಗೆ ಒಡೆದಿದೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಕಾರಂಜಿಯಂತೆ ಚಿಮ್ಮಲು ಶುರು ಮಾಡಿದೆ. ಈ ವಿಷಯ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕಾಳ್ಗಿಚ್ಚಿನಂತೆ ಹಬ್ಬಿದೆ. ಅಂತೆಯೇ, ರೈತನ ಹೊಲಕ್ಕೆ ಅಪಾರ ಜನರು ದೌಡಾಯಿಸುತ್ತಿದ್ಧಾರೆ.
ಈ ರೀತಿ ಚಿಮ್ಮಲು ಕಾರಣವೇನು?: ಹೊಲದಲ್ಲಿ ನೀರು ಹಾಗೂ ಅನಿಲ ಚಿಮ್ಮುತ್ತಿರುವ ಬಗ್ಗೆ ತಜ್ಞರು ಪ್ರತಿಕ್ರಿಯಿಸಿದ್ದು, ಇದು ಸಾರಜನಕ ಅಥವಾ ಇನ್ನಾವುದೋ ನೈಸರ್ಗಿಕ ಅನಿಲ ಇರಬಹುದು ಎಂದು ಶಂಕಿಸಿದ್ದಾರೆ. ನೆಲದೊಳಗೆ ಬಹಳಷ್ಟು ಅನಿಲ ಇರುವ ಸಾಧ್ಯತೆ ಇದೆ. ಅಲ್ಲದೇ, ಭೂಮಿಯಲ್ಲಿ ಶಿಲೆಗಳ ಘರ್ಷಣೆಯಿಂದ ಅನಿಲ ಉತ್ಪಾದನೆಯಾಗಿರುವ ಸಂಭವ ಇರುತ್ತದೆ. ಹೀಗಾಗಿ ಕೊಳವೆ ಬಾವಿ ಅಥವಾ ಟೊಳ್ಳು ಸ್ಥಳದಿಂದ ಅದು ಹೊರ ಬರುತ್ತದೆ ಎಂದು ಹೇಳಿದ್ಧಾರೆ.
ಇದೇ ವೇಳೆ, ಕೆಲ ದಿನಗಳ ಹಿಂದೆ ಗ್ರಾಮ ಬೋರ್‌ವೆಲ್‌ನಲ್ಲಿ ರಾಹುಲ್ ಸಾಹು ಎಂಬ ಬಾಲಕ ಬಿದ್ದಿದ್ದ. ಈ ಬಾಲಕನನ್ನು ರಕ್ಷಿಸಲು ಭಾರಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಅಲ್ಲದೇ, ದೊಡ್ಡ ಹೊಂಡ ಕೂಡ ಅಗೆಯಲಾಗಿತ್ತು. ಮಳೆಯಿಂದ ಹೊಂಡದಲ್ಲಿ ನೀರು ಸಂಗ್ರಹವಾಗಿದೆ. ಅದರಿಂದಾಗಿಯೂ ನೀರು ಅಥವಾ ಅನಿಲ ಹೊರ ಹೊಮ್ಮುತ್ತಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ದಾಖಲೆ ಬರೆದ ತಿರುಪತಿ ವೆಂಕಟೇಶ್ವರ.. ಒಂದೇ ದಿನ ದಾಖಲೆಯ ₹6 ಕೋಟಿ ದೇಣಿಗೆ ಸಂಗ್ರಹ