ನವದೆಹಲಿ: ಭಾರತದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ವಕೀಲರು ಪ್ರಕರಣಗಳ ಕುರಿತಂತೆ ವಾದ ಮಂಡಿಸುವಾಗ 'ಮೈ ಲಾರ್ಡ್' ಮತ್ತು 'ಯುವರ್ ಲಾರ್ಡ್‌ಶಿಪ್' ಎಂದು ಹೇಳುತ್ತಾರೆ. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಬುಧವಾರ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಕುತೂಹಲದ ಘಟನೆ ನಡೆಯಿತು.
ಪ್ರಕರಣವೊಂದರ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರೊಂದಿಗೆ ಪೀಠದಲ್ಲಿದ್ದ ನ್ಯಾ.ಪಿ.ಎಸ್.ನರಸಿಂಹ ಅವರು ಹಿರಿಯ ವಕೀಲರೊಬ್ಬರಿಗೆ ‘ಮೈ ಲಾರ್ಡ್ಸ್’ ಎಂದು ಎಷ್ಟು ಬಾರಿ ಹೇಳುತ್ತೀರಿ? ಹೀಗೆ ಹೇಳುವುದನ್ನು ನಿಲ್ಲಿಸಿದರೆ ನನ್ನ ಸಂಬಳದಲ್ಲಿ ಅರ್ಧದಷ್ಟು ನಿಮಗೆ ಕೊಡುತ್ತೇನೆ ಎಂದುಬಿಟ್ಟರು.
ನ್ಯಾ.ನರಸಿಂಹ ಅವರು, "ಸರ್ ಎಂದು ಏಕೆ ಬಳಸಬಾರದು?, ಇಲ್ಲದಿದ್ದರೆ ಹಿರಿಯ ವಕೀಲರು ಮೈ ಲಾರ್ಡ್ಸ್ ಎಂಬ ಪದವನ್ನು ಎಷ್ಟು ಬಾರಿ ಉಚ್ಚರಿಸಿದ್ದಾರೆ ಎಂದು ಲೆಕ್ಕ ಹಾಕಬೇಕಾಗುತ್ತದೆ" ಎಂದರು.
ನ್ಯಾಯಾಲಯದಲ್ಲಿ ಯಾವುದೇ ಪ್ರಕರಣದ ವಿಚಾರಣೆ ಅಥವಾ ಚರ್ಚೆಯ ಸಮಯದಲ್ಲಿ ವಕೀಲರು ನ್ಯಾಯಾಧೀಶರನ್ನು 'ಮೈ ಲಾರ್ಡ್' ಅಥವಾ 'ಯುವರ್ ಲಾರ್ಡ್‌ಶಿಪ್' ಎಂದು ಕರೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಈ ಪದ್ಧತಿಯನ್ನು ವಿರೋಧಿಸುವವರು ಇದನ್ನು ವಸಾಹತುಶಾಹಿ ಯುಗದ ಸಂಕೇತವೆಂದು ಕರೆಯುತ್ತಾರೆ.
2006ರಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿರ್ಣಯವೊಂದನ್ನು ಅಂಗೀಕರಿಸಿತ್ತು. ಈ ನಿರ್ಣಯದ ಪ್ರಕಾರ, ಯಾವುದೇ ವಕೀಲರು ನ್ಯಾಯಾಧೀಶರನ್ನು 'ಮೈ ಲಾರ್ಡ್' ಮತ್ತು 'ಯುವರ್ ಲಾರ್ಡ್‌ಶಿಪ್' ಎಂದು ಕರೆಯಬಾರದು. ಆದರೆ ಇದನ್ನು ವಕೀಲರು ಅನುಸರಿಸುತ್ತಿಲ್ಲ. ಹೀಗಾಗಿ ಪದ್ಧತಿ ಜಾರಿಯಲ್ಲಿದೆ.
ಇದನ್ನೂ ಓದಿ: ಕೆವೈಸಿಗಿಂತ ಚುನಾವಣಾ ಬಾಂಡ್ ಹೆಚ್ಚು ಪ್ರಯೋಜನಕಾರಿ: ಸುದೀರ್ಘ ವಿಚಾರಣೆ ಬಳಿಕ ತೀರ್ಪು ಕಾಯ್ದಿರಿಸಿದ ಸುಪ್ರೀಂ
'ಜಡ್ಜ್ಗಳಿಗೆ ಶಿಸ್ತು ಮುಖ್ಯ': ನ್ಯಾಯಾಧೀಶರು ಶಿಸ್ತು ಪಾಲಿಸಬೇಕು. ಮುಖ್ಯ ನ್ಯಾಯಮೂರ್ತಿಗಳು ನಿರ್ದಿಷ್ಟವಾಗಿ ನಿಯೋಜಿಸದ ಹೊರತು ಯಾವುದೇ ಪ್ರಕರಣವನ್ನು ಕೈಗೆತ್ತಿಕೊಳ್ಳಬಾರದು. ಯಾವುದೇ ಅರ್ಜಿಗಳ ವಿಚಾರಣೆಯ ವೇಳೆ ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕು ಎಂದು ಅಕ್ಟೋಬರ್ 25ರಂದು ಸುಪ್ರೀಂ ಕೋರ್ಟ್ ತನ್ನ ಜಡ್ಜ್ಗಳಿಗೆ ನೀತಿಪಾಠ ಹೇಳಿತ್ತು. 8 ಎಫ್ಐಆರ್ಗಳನ್ನು ಒಟ್ಟು ಮಾಡಲು ಕೋರಿರುವ ಸಿವಿಲ್ ರಿಟ್ ಅರ್ಜಿಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಪಂಕಜ್ ಮಿಥಾಲ್ ಅವರಿದ್ದ ಪೀಠವು, ರಾಜಸ್ಥಾನ ಹೈಕೋರ್ಟ್ ಮೇ ತಿಂಗಳಲ್ಲಿ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಈ ರೀತಿ ಸೂಚನೆ ನೀಡಿತ್ತು.
ಇದನ್ನೂ ಓದಿ: ಜಡ್ಜ್ಗಳಿಗೆ ಶಿಸ್ತು ಮುಖ್ಯ, ತಮಗೆ ವಹಿಸದ ಪ್ರಕರಣ ಕೈಗೆತ್ತಿಕೊಳ್ಳಬಾರದು: ಸುಪ್ರೀಂ ಕೋರ್ಟ್