ಸೂರತ್: ಗುಜರಾತ್ ವಿಧಾನಸಭೆ ಚುನಾವಣೆಯ ಕಾವು ಉತ್ತುಂಗಕ್ಕೇರಿದೆ. ರಾಜಕೀಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಈ ಬಾರಿ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಸೂರತ್‌ನ ಸರ್ಥಾನಾ ಪ್ರದೇಶದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಎಎಪಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಪರಸ್ಪರ ಕಲ್ಲು ತೂರಾಟ ನಡೆಸಿ ಕಾರುಗಳ ಗಾಜುಗಳನ್ನು ಧ್ವಂಸಗೊಳಿಸಲಾಗಿದೆ.
ಸೂರತ್‌ನ ಕಿರಣ್ ಚೌಕ್‌ನಲ್ಲಿ ಆಪ್ ವತಿಯಿಂದ ಸಭೆ ಆಯೋಜಿಸಲಾಗಿತ್ತು. ಸರ್ಥಾನಾ ಪ್ರದೇಶದಲ್ಲಿ ಎಎಪಿ ಸಭೆ ನಡೆಯುತ್ತಿದ್ದಾಗ ಕಾರ್ಯಕರ್ತರು ಕುರ್ಚಿ ಎಸೆದಿದ್ದು, ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದಾದ ಮೇಲೆ ಎಎಪಿ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿ ಕಾರುಗಳನ್ನು ಧ್ವಂಸಗೊಳಿಸಿದ್ದಾರೆ. ಕೆಲ ವಾಹನಗಳ ಗಾಜುಗಳು ಒಡೆದಿದೆ. ಘಟನೆಯಿಂದಾಗಿ ಹಲವರು ಗಾಯಗೊಂಡಿದ್ದಾರೆ. ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಸ್ಥಳಕ್ಕಾಮಿಸಿದ ಪೊಲೀಸರು ಘರ್ಷಣೆ ಶಾಂತಗೊಳಿಸಿ, ಪರಿಸ್ಥಿತಿ ಹತೋಟಿಗೆ ತಂದರು.
ಇದನ್ನೂ ಓದಿ: ಸಿಪಿಎಂ ತಿರುವನಂತಪುರ ಜಿಲ್ಲಾ ಸಮಿತಿ ಕಚೇರಿ ಮೇಲೆ ಕಲ್ಲು ತೂರಾಟ.. ವಿಡಿಯೋ
ಗುಜರಾತ್ ವಿಧಾನಸಭೆಯ 182 ಸ್ಥಾನಗಳ ಪೈಕಿ 89 ಸ್ಥಾನಗಳಿಗೆ ಡಿಸೆಂಬರ್ 1 ರಂದು ಮತದಾನ ನಡೆಯಲಿದೆ. ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಎರಡನೇ ಹಂತದಲ್ಲಿ ಮತದಾನ ನಿಗದಿಯಾಗಿದೆ. ಡಿಸೆಂಬರ್ 8 ರಂದು ಹಿಮಾಚಲ ಪ್ರದೇಶದ ಫಲಿತಾಂಶದ ಜೊತೆಗೆ ಗುಜರಾತ್ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.