ಲಖನೌ: ದೇಶದ ಮೊದಲ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ಗಳ ಮೇಲೆ ಕಲ್ಲು ತೂರಾಟದ ಘಟನೆಗಳು ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಾರ್ಯಾಚರಣೆ ಪ್ರಾರಂಭಿಸಿದ ಎಲ್ಲ ರಾಜ್ಯಗಳಲ್ಲಿ ಕಲ್ಲು ತೂರಾಟ ವರದಿಗಳು ಆಗಿವೆ. ಈ ಮಾತಿಗೆ ಇಂಬು ನೀಡುವಂತೆ ಉತ್ತರಪ್ರದೇಶದಲ್ಲೂ ನಡೆದಿದೆ. ಗೋರಖ್‌ಪುರ ಮತ್ತು ಲಕ್ನೋ ನಡುವೆ ಸಂಚರಿಸುವ ವಂದೇ ಭಾರತ್ ಮೇಲೂ ಕಿಡಿಗೇಡಿಗಳು ಶುಕ್ರವಾರ ಕಲ್ಲು ಎಸೆದಿದ್ದಾರೆ.
ಈಗ ಎರಡು ತಿಂಗಳಲ್ಲಿ ಎರಡು ಬಾರಿ ವಂದೇ ಭಾರತ್ ರೈಲಿಗೆ ಕಲ್ಲು ಎಸೆಯಲಾಗಿದೆ. ಒಂದೂವರೆ -ಎರಡು ತಿಂಗಳ ಹಿಂದೆ, ಅಯೋಧ್ಯಾ ರೈಲು ನಿಲ್ದಾಣದ ಬಳಿ ವಂದೇ ಭಾರತ್ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಶುಕ್ರವಾರವಾದ ನಿನ್ನೆ ಮಲ್ಹೌರ್ ಬಳಿ ಗೋರಖ್‌ಪುರದಿಂದ ಲಕ್ನೋಗೆ ಬರುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ರೈಲಿನ ಗಾಜಿಗೆ ಹಾನಿಯಾಗಿದೆ. ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದವರಿಗಾಗಿ ಆರ್‌ಪಿಎಫ್ ಹುಡುಕಾಟ ಆರಂಭಿಸಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಬೆಳಗ್ಗೆ ಗೋರಖ್‌ಪುರದಿಂದ ಲಕ್ನೋಗೆ ಸಂಚಾರ ಮಾಡುತ್ತಿತ್ತು. ಇದೇ ವೇಳೆ ಮಲ್ಹೌರ್ ರೈಲು ನಿಲ್ದಾಣದ ಮೂಲಕ ಸಾಗುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಇದರಿಂದಾಗಿ ರೈಲಿನ ಕೋಚ್ ಸಂಖ್ಯೆ ಸಿ - 3 ಮೂರರ ಗಾಜು ಜಖಂಗೊಂಡಿದೆ.
ಗಾಜು ಜಖಂಗೊಂಡಿದ್ದರಿಂದ ರೈಲಿನಲ್ಲಿದ್ದ ಪ್ರಯಾಣಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರೈಲಿನಲ್ಲಿ ಗಸ್ತು ತಿರುಗುತ್ತಿರುವ ಆರ್‌ಪಿಎಫ್ ಸಿಬ್ಬಂದಿ ಕಲ್ಲು ತೂರಿದವರಿಗಾಗಿ ಹುಡುಕಾಟ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ನೋಡಿ ದುಷ್ಕರ್ಮಿಗಳನ್ನು ಹುಡುಕುವ ಕೆಲವನ್ನು ಭದ್ರತಾ ಸಿಬ್ಬಂದಿ ಮಾಡುತ್ತಿದೆ. ಆಗಸ್ಟ್ 7 ರಂದು ಸಫೇದಾಬಾದ್ ರೈಲು ನಿಲ್ದಾಣದ ಬಳಿ ದುಷ್ಕರ್ಮಿಗಳು ರೈಲಿಗೆ ಕಲ್ಲು ತೂರಾಟ ನಡೆಸಿದ್ದರು. ಕಲ್ಲು ತೂರಾಟದಿಂದಾಗಿ ಕೋಚ್‌ನ ಹಲವು ಗಾಜುಗಳು ಒಡೆದು ಪುಡಿ ಪುಡಿ ಆಗಿದ್ದವು.
ಜುಲೈ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗೋರಖ್‌ಪುರದಿಂದ ಲಕ್ನೋಗೆ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಜುಲೈ 9 ರಿಂದ ರೈಲು ನಿತ್ಯದ ಓಡಾಟ ಆರಂಭಿಸಿತ್ತು. ಈ ರೈಲು ಬೆಳಗ್ಗೆ ಗೋರಖ್‌ಪುರದಿಂದ ಲಕ್ನೋಗೆ ಹೊರಡುತ್ತದೆ. ರಾತ್ರಿ 7:15ಕ್ಕೆ ಲಕ್ನೋದಿಂದ ಗೋರಖ್‌ಪುರಕ್ಕೆ ಹಿಂತಿರುಗುತ್ತದೆ. ಜುಲೈ 9 ರಿಂದ ಗೋರಖ್‌ಪುರದಿಂದ ಲಕ್ನೋಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವಾಣಿಜ್ಯ ಓಡಾಟ ಪ್ರಾರಂಭವಾದಾಗ, ಎರಡು ದಿನಗಳ ನಂತರ ಜುಲೈ 11 ರಂದು ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಘಟನೆಯಲ್ಲಿ ಮೂವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ.
ಇದನ್ನು ಓದಿ: ಮೈಸೂರು - ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ಎಸೆತ..