ಮಥುರಾ(ಉತ್ತರ ಪ್ರದೇಶ): ತನ್ನ ಜೊತೆ ಮಲಗುವಂತೆ ಹಠ ಹಿಡಿದಿದ್ದಕ್ಕೆ ಕೋಪಗೊಂಡ ಮಲತಂದೆಯೋರ್ವ 10 ವರ್ಷದ ಬಾಲಕನನ್ನು ನಿರ್ದಯಿಯಾಗಿ ಥಳಿಸಿ ಕೊಂದಿರುವ ಅಮಾನವೀಯ ಘಟನೆ ಮಥುರಾದಲ್ಲಿ ನಡೆದಿದೆ. ಡಬಲ್ ಬೆಡ್ ಮೇಲೆ ಮಲಗಲು ಹೇಳಿದ್ದಕ್ಕೆ ಕುಪಿತಗೊಂಡ ತಂದೆ ಮಗನನ್ನೇ ಕೊಂದಿದ್ದಾನೆ.
ಬುಧವಾರ ತಡರಾತ್ರಿ ಮಥುರಾದ ಪುಷ್ಪ್ ವಿಹಾರ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಆರೋಪಿ ಮಲತಂದೆ ಪ್ರೇಮವೀರ್, ತಮ್ಮ 10 ವರ್ಷದ ಮಗನನ್ನು ಹೊಡೆದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸಂಬಂಧಿಕರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಬಾಲಕ ತನ್ನ ಮಲತಂದೆಯ ಜೊತೆ ಡಬಲ್ ಬೆಡ್ ಮೇಲೆ ಮಲಗಬೇಕೆಂದು ಹಠ ಮಾಡುತ್ತಿದ್ದ. ಇದರಿಂದ ಕೋಪಗೊಂಡ ಪ್ರೇಮವೀರ್ ಮಗನಿಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಆಗ ಬಾಲಕ ತೀವ್ರ ಗಾಯದಿಂದ ಸಾವಿಗೀಡಾಗಿದ್ದಾನೆ. ಘಟನೆ ವೇಳೆ ಬಾಲಕನ ತಾಯಿ ನೀಲಂ ಕೂಡ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡನೇ ಮದುವೆ: ಬಾಲಕನ ತಾಯಿ ನೀಲಂ ಮೊದಲ ಪತಿ ತೀರಿಕೊಂಡ ನಂತರ 3 ತಿಂಗಳ ಹಿಂದೆ ಪ್ರೇಮವೀರ್ ಜೊತೆ ವಿವಾಹವಾಗಿದ್ದರು. ಮದುವೆ ಬಳಿಕ ಪ್ರೇಮವೀರ್ ಹಾಗೂ ನೀಲಂ ದಂಪತಿಯ ಸಂಸಾರ ನೆಮ್ಮದಿಯಿಂದ ನಡೆಯುತ್ತಿತ್ತು. ಆದರೆ ಕಳೆದ ಕೆಲ ದಿನಗಳಿಂದ ಪ್ರೇಮ್‌ವೀರ್ ರಾತ್ರಿ ಮಲಗುವ ವಿಚಾರಕ್ಕೆ ಮಕ್ಕಳನ್ನು ಥಳಿಸುತ್ತಿದ್ದ ಎನ್ನಲಾಗ್ತಿದೆ.
ಮೊದಲ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರಿಂದ ನೀಲಂ ಎರಡನೇ ವಿವಾಹವಾಗಿದ್ದರು. ಬುಧವಾರ ರಾತ್ರಿ ಒಂದು ಗಂಟೆ ಸುಮಾರಿಗೆ ಬಾಲಕನಿಗೆ ತಂದೆ ದೊಣ್ಣೆಯಿಂದ ಥಳಿಸಿದ್ದಾರೆ. ಇದರಿಂದಾಗಿ ಬಾಲಕನ ಸಾವು ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮದುವೆಗೆ ಬಂದ ಬಾಲಕಿ ಮೇಲೆ ಅತ್ಯಾಚಾರ; ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು