ನವದೆಹಲಿ: ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರನ್ನು ಆಯಾ ರಾಜ್ಯಗಳೇ ನಿರ್ಧರಿಸಿ, ಘೋಷಿಸಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಕಾಯ್ದೆ 2004 ರ ಸಿಂಧುತ್ವ ಪ್ರಶ್ನಿಸಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಮನವಿಗೆ ಈ ಪ್ರತಿಕ್ರಿಯೆ ನೀಡಲಾಗಿದೆ.
ಅಶ್ವಿನಿಕುಮಾರ್ ಉಪಾಧ್ಯಾಯ ಅವರು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಕಾಯ್ದೆಯ ಸೆಕ್ಷನ್ 2 (ಎಫ್)ನ ಸಿಂಧುತ್ವ ಪ್ರಶ್ನಿಸಿದ್ದರು. ಇದು ಕೇಂದ್ರಕ್ಕೆ ಅನಿಯಂತ್ರಿಕ ಅಧಿಕಾರ ನೀಡುತ್ತದೆ. ಇದು ಆಕ್ಷೇಪಾರ್ಹ ಎಂದು ಆರೋಪಿಸಿ ಮನವಿ ಸಲ್ಲಿಸಿದ್ದರು.
ಈ ಕುರಿತಂತೆ ಸ್ಪಷ್ಟನೆ ನೀಡಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಕೋರಿತ್ತು. ಇದಕ್ಕೆ ಉತ್ತರಿಸಿರುವ ಅಲ್ಪಸಂಖ್ಯಾತ ಇಲಾಖೆ, ಧಾರ್ಮಿಕ ಅಥವಾ ಭಾಷಾ ಸಮುದಾಯವನ್ನು ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯ ಎಂದು ಆಯಾ ರಾಜ್ಯ ಸರ್ಕಾರಗಳೇ ಘೋಷಿಸಬಹುದು. ಉದಾಹರಣೆಗೆ, ಮಹಾರಾಷ್ಟ್ರ ಸರ್ಕಾರ 'ಯಹೂದಿಗಳನ್ನು' ರಾಜ್ಯದೊಳಗೆ ಅಲ್ಪಸಂಖ್ಯಾತ ಸಮುದಾಯ ಎಂದು ಘೋಷಿಸಿದೆ. ಇದಲ್ಲದೇ, ಕರ್ನಾಟಕ ಉರ್ದು, ತೆಲುಗು, ತಮಿಳು, ಮಲಯಾಳಂ, ಮರಾಠಿ, ತುಳು, ಲಮಾಣಿ, ಹಿಂದಿ, ಕೊಂಕಣಿ ಮತ್ತು ಗುಜರಾತಿ ಭಾಷೆಗಳನ್ನು ಅಲ್ಪಸಂಖ್ಯಾತ ಭಾಷೆಯನ್ನಾಗಿ ಅಧಿಸೂಚಿಸಿದೆ ಎಂದು ತಿಳಿಸಿದೆ.
ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಕಾಯಿದೆ-1992, ಸಂವಿಧಾನದ 246 ನೇ ವಿಧಿಯ 7 ನೇ ಅನುಸೂಚಿಯಲ್ಲಿ ಬರುವ ಸಾರ್ವತ್ರಿಕ ಪಟ್ಟಿಯಂತೆ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರನ್ನು ಗುರುತಿಸಿ ಕಾನೂನು ಜಾರಿಗೊಳಿಸುವ ಅಧಿಕಾರ ಹೊಂದಿವೆ. ಒಂದು ವೇಳೆ ಸಂಸತ್ತು ಈ ವಿಷಯ ಕುರಿತಾಗಿ ಕಾನೂನು ಮಾಡಿದಲ್ಲಿ ಅದು ರಾಜ್ಯಗಳ ಕಾನೂನಿಗೆ ವಿರುದ್ಧವಾಗುತ್ತದೆ. ಇದು ಸಾಂವಿಧಾನಿಕ ಆಶಯಕ್ಕೆ ವಿರುದ್ಧವಾಗಲಿದೆ.
ಹೀಗಾಗಿ ಆಯಾ ರಾಜ್ಯಗಳೇ ಅಲ್ಪಸಂಖ್ಯಾತರನ್ನು ಗುರುತಿಸಬಹುದುದಾಗಿದೆ. ಇದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯಿದೆ-1992 ಮತ್ತು ಸಂವಿಧಾನದ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸಿದಂತಾಗುವುದಿಲ್ಲ ಎಂದು ತಿಳಿಸಿದೆ. ಇನ್ನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಕಾಯ್ದೆಯ ಸೆಕ್ಷನ್ 2 (ಎಫ್) ಕೇಂದ್ರ ಸರ್ಕಾರಕ್ಕೆ ಅನಿಯಂತ್ರಿಕ ಅಧಿಕಾರ ನೀಡುತ್ತದೆ ಎಂಬುದನ್ನು ಕೇಂದ್ರ ನಿರಾಕರಿಸಿದೆ.
ಓದಿ: ಏಪ್ರಿಲ್ 1 ಬರ್ತಿದೆ.. ಬ್ಯಾಂಕಿಂಗ್, ಅಂಚೆ ಕಚೇರಿ, ಟ್ಯಾಕ್ಸ್ ನಿಯಮಗಳಲ್ಲಿ ಬದಲಾವಣೆಗಳಿಗೆ ಸಿದ್ಧರಾಗಿ..