ಹೈದರಾಬಾದ್: ಫೆಬ್ರವರಿ 24 ರಿಂದ ರಷ್ಯಾ ಉಕ್ರೇನ್ ವಿರುದ್ಧ ಸಮರ ಸಾರಿದ್ದು, ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರಲು ತಗಲುವ ಎಲ್ಲಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಘೋಷಿಸಿದ್ದಾರೆ. ಇದಲ್ಲದೇ ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳು ಸಹ ತಮ್ಮ ರಾಜ್ಯದವರನ್ನು ಕರೆಸಿಕೊಳ್ಳಲು ಶ್ರಮ ಪಡುತ್ತಿವೆ.
ಉಕ್ರೇನ್‌ನಲ್ಲಿ ಸಿಲುಕಿರುವ ತಮಿಳುನಾಡಿನ 916 ವಿದ್ಯಾರ್ಥಿಗಳು ಮತ್ತು ವಲಸಿಗರನ್ನು ಸ್ಥಳಾಂತರಿಸುವ ಕುರಿತು ಅಧಿಕಾರಿಗಳ ಜೊತೆ ತಮಿಳುನಾಡು ಸರ್ಕಾರ ಸಂಪರ್ಕದಲ್ಲಿದೆ.
ಇನ್ನು ಈ ಪರಿಸ್ಥಿತಿಯಲ್ಲಿ ತಮಿಳುನಾಡು ವಿದ್ಯಾರ್ಥಿಗಳು ದೇಶಕ್ಕೆ ಮರಳಲು ಸಂಬಂಧಿಸಿದ ಎಲ್ಲಾ ಪ್ರಯಾಣ ವೆಚ್ಚವನ್ನು ತಮಿಳುನಾಡು ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಘೋಷಿಸಿದ್ದಾರೆ. ಈ ಉದ್ದೇಶಕ್ಕಾಗಿ ಅನಿವಾಸಿ ತಮಿಳರ ಪುನರ್ವಸತಿ ಮತ್ತು ಕಲ್ಯಾಣದ ನಿರ್ದೇಶಕಿ ಜೆಸಿಂತಾ ಲಾಜರಸ್ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಫೆ.28 ರಂದು ಎಂಕೆ ಸ್ಟಾಲಿನ್ ಆತ್ಮಕಥೆ ಬಿಡುಗಡೆ ಮಾಡಲಿರುವ ರಾಹುಲ್ ಗಾಂಧಿ
ಹಾಗೆ ಒಡಿಶಾ ಮತ್ತು ತೆಲಂಗಾಣ ಸರ್ಕಾರಗಳು ಉಕ್ರೇನ್‌ನಲ್ಲಿ ಸಿಲುಕಿರುವ ಆಯಾ ರಾಜ್ಯಗಳ ವಿದ್ಯಾರ್ಥಿಗಳನ್ನು ಕರೆತರಲು ಅದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನೋಡಿಕೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸಿವೆ. ಉಕ್ರೇನ್‌ನಲ್ಲಿ ಸಿಲುಕಿರುವ ಒಡಿಶಾದ ವಿದ್ಯಾರ್ಥಿಗಳು ಮತ್ತು ಕಾರ್ಮಿಕರನ್ನು ಮರಳಿ ಕರೆತರುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಹ ಘೋಷಿಸಿದ್ದಾರೆ.
ಅಂತೆಯೇ, ತೆಲಂಗಾಣ ಸಚಿವ ಕೆಟಿಆರ್ ಅವರು ಸಹ ಈ ಬಗ್ಗೆ ಉಲ್ಲೇಖ ಮಾಡಿದ್ದು, ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ಸಂಪೂರ್ಣ ಪ್ರಯಾಣ ವೆಚ್ಚವನ್ನು ಭರಿಸಲಾಗುತ್ತದೆ ಎಂದಿದ್ದಾರೆ. ಕರ್ನಾಟಕದ ಸುಮಾರು 350 ವಿದ್ಯಾರ್ಥಿಗಳು ಮತ್ತು ತೆಲಂಗಾಣ ಮತ್ತು ಆಂಧ್ರಪ್ರದೇಶದ 1500 ವಿದ್ಯಾರ್ಥಿಗಳು ಒಟ್ಟಾಗಿ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನ ದರವು ದುಬಾರಿಯಾಗಿರುವುದರಿಂದ ಅಥವಾ ಫೆಬ್ರುವರಿ ಅಂತ್ಯದವರೆಗೆ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರಿಂದ ಅವರಲ್ಲಿ ಹಲವರು ಮೊದಲೇ ದೇಶಕ್ಕೆ ಮರಳಲು ಸಾಧ್ಯವಾಗಿರಲಿಲ್ಲ.
ಯುದ್ಧ ಪೀಡಿತ ಪ್ರದೇಶದಿಂದ ಹೊರಹೊಮ್ಮುವ ಸುದ್ದಿಯಿಂದ ವಿದ್ಯಾರ್ಥಿಗಳ ಜೊತೆಗೆ, ಪೋಷಕರೂ ಕಂಬನಿ ಮಿಡಿಯುತ್ತಿದ್ದಾರೆ. ಮಹಾರಾಷ್ಟ್ರದ ಸುಮಾರು 1200 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಮಂತ್ ಹೇಳಿದ್ದಾರೆ. ಈಗಾಗಲೇ ಬುಕಾರೆಸ್ಟ್‌ಗೆ ಎರಡು ವಿಮಾನಗಳು ಮತ್ತು ನಾಳೆ ಬುಡಾಪೆಸ್ಟ್‌ಗೆ ಒಂದು ವಿಮಾನವನ್ನು ಭಾರತ ಸರ್ಕಾರದ ಚಾರ್ಟರ್ಡ್ ಫ್ಲೈಟ್‌ಗಳಾಗಿ ನಿರ್ವಹಿಸಲು ಯೋಜಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.