ಪಲಮು (ಜಾರ್ಖಂಡ್): ಜಾರ್ಖಂಡ್ ಸರ್ಕಾರ ಇಡೀ ಹಳ್ಳಿಯನ್ನೇ ಖಾಸಗಿ ಕಂಪನಿಗೆ ಮಾರಾಟ ಮಾಡಿರುವ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಗರ್ಹ್ವಾ ಜಿಲ್ಲೆಯಲ್ಲಿನ ಹಳ್ಳಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಪ್ರಕರಣ ಸಂಬಂಧ ಸುನಿಲ್ ಮುಖರ್ಜಿ ನಗರ್ ನಿವಾಸಿ ಪಲಮು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಗರ್ಹ್ವಾ ಜಿಲ್ಲೆಯ ರಾಮುನ ಬ್ಲಾಕ್ನ ಸುನೀಲ್ ಮುಖರ್ಜಿ ನಗರ್ ಅನ್ನು 1890ರಲ್ಲಿ ಎಡಪಂಥೀಯ ಸಂಘಟನೆಯ ಜೊತೆ ನಿರ್ಮಾಣ ಮಾಡಲಾಗಿತ್ತು. 456 ಎಕರೆಯಲ್ಲಿ ನಿರ್ಮಾಣವಾಗಿರುವ ಈ ಹಳ್ಳಿಯಲ್ಲಿ 250 ಕುಟುಂಬಗಳು ಕಳೆದ ಮೂರು ದಶಕಗಳಿಂದ ವಾಸ ಮಾಡುತ್ತಾ ಬಂದಿದ್ದಾರೆ. ಈ ಪ್ರಕರಣ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದು, ತೀರ್ಪಿಗೆ ಕಾಯುತ್ತಿದ್ದಾರೆ.
ಕಳೆದ ಹಲವು ದಶಕಗಳಿಂದ ಗ್ರಾಮಸ್ಥರು ಇಲ್ಲಿ ವಾಸ ಮಾಡುತ್ತಿದ್ದು, ಈ ಭೂಮಿಯ ಹಕ್ಕನ್ನು ಹೊಂದಿದ್ದಾರೆ. ಇದು ನಮ್ಮ ನೆಲ. ನಾವು ಹಲವು ವರ್ಷಗಳಿಂದ ಈ ಭೂಮಿಯಲ್ಲಿ ವಾಸ ಮಾಡುತ್ತಿದ್ದೇವೆ. ಸರ್ಕಾರ ಈಗ ಈ ಗ್ರಾಮವನ್ನು ಖಾಸಗಿ ಕಂಪನಿಗೆ ಮಾರಾಟ ಮಾಡುವ ಮೂಲಕ ನಮ್ಮನ್ನು ಸಂಕಷ್ಟಕ್ಕೆ ದೂಡಿದೆ ಎಂದು ಗ್ರಾಮದ ನಿವಾಸಿ ಧನಂಜಯ್ ಪ್ರಸಾದ್ ಮೆಹ್ತಾ ತಿಳಿಸಿದ್ದಾರೆ.
ಈ ಗ್ರಾಮಸ್ಥರ ದುಸ್ಥಿತಿ ಎಂದರೆ, ಇವರೆಲ್ಲರೂ ಭೂಮಿಯನ್ನು ಹೊಂದಿದ್ದು, ಈ ಭೂಮಿ ತಮ್ಮದು ಎಂಬ ಮಾಲೀಕತ್ವದ ದಾಖಲಾತಿ ಪತ್ರವನ್ನು ಹೊಂದಿಲ್ಲ. ಹೀಗಾಗಿ ಇಲ್ಲಿಗೆ ಯಾವುದೇ ರಸ್ತೆ, ನೀರು ಮತ್ತು ವಿದ್ಯುತ್ನಂತಹ ಮೂಲಭೂತ ಸೌಲಭ್ಯವೂ ಕೂಡ ಸಿಕ್ಕಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷಗಳು ಮೂಲಭೂತ ಸೌಲಭ್ಯವನ್ನು ನೀಡುವ ಭರವಸೆ ನೀಡಿ ಅವರನ್ನು ಮರೆತು ಬಿಡಲಾಗಿದೆ.
ನಮ್ಮ ಗ್ರಾಮವನ್ನು ಮಾರಾಟ ಮಾಡಲಾಗಿದೆ ಎಂಬುದೇ ನಮಗೆ ತಿಳಿದಿರಲಿಲ್ಲ. ಒಂದು ದಿನ ಕಂಪನಿ ಕಲ್ಲು ಮತ್ತು ಸಿಮೆಂಟ್ ತಂದು ನಮ್ಮ ಸ್ಥಳದಲ್ಲಿ ಹಾಕಿ, ಬೇಲಿ ನಿರ್ಮಾಣಕ್ಕೆ ಮುಂದಾದಾಗ ಗ್ರಾಮ ಮಾರಾಟವಾದ ಸತ್ಯ ಬಯಲಾಯಿತು ಎಂದು ಇಲ್ಲಿನ ನಿವಾಸಿ ನವರಂಗ್ ಪಾಲ್ ತಿಳಿಸಿದ್ದಾರೆ.
ಕಳೆದ ಎರಡು ದಶಕದ ಹಿಂದೆ ಸರ್ಕಾರದ ವಸತಿ ಯೋಜನೆ ಅಡಿ ನಮಗೆ ಕೆಲವು ಸೌಲಭ್ಯಗಳನ್ನು ನೀಡಲಾಯಿತು. ಆದರೆ, ಶಾಲೆ, ರಸ್ತೆ, ವಿದ್ಯುತ್ನಂತಹ ಮೂಲಭೂತ ವ್ಯವಸ್ಥೆಯನ್ನು ನೀಡಲಿಲ್ಲ. ಈ ಪ್ರಕರಣ ಇದೀಗ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಹೇಳಿಕೆ ನೀಡಲು ಹಿಂದೇಟು ಹಾಕಿದ್ದಾರೆ.
ಇದನ್ನೂ ಓದಿ: ಖಾಸಗಿ ಅಂಗಗಳ ಮೇಲೆ ಹೆಸರು ಬರೆಸಿಕೊಳ್ಳುವಂತೆ ಯುವತಿಗೆ ಒತ್ತಾಯ: ಆರೋಪಿ ಬಂಧನ